ನ್ಯೂಸ್

ಸಂಪಾದಕೀಯ: ಮಹತ್ವದ ಒಪ್ಪಂದ

ಬಾಬುಪ್ರಸಾದ್​ ಮೋಡಿಸ್​

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ನಡುವೆ ಕೊಲಂಬೊದಲ್ಲಿ ಶನಿವಾರ ನಡೆದ ಮಾತುಕತೆ ಬಳಿಕ ಉಭಯ ದೇಶಗಳು ಏಳು ಒಪ್ಪಂದಗಳಿಗೆ ಸಹಿಹಾಕಿವೆ. ಈ ಪೈಕಿ ರಕ್ಷಣಾ ಒಪ್ಪಂದ ಬಹು ಮಹತ್ವದ್ದಾಗಿದೆ.

ಚೀನಾವು ಭಾರತದ ನೆರೆನಾಡುಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ನಾನಾ ಬಗೆಯಲ್ಲಿ ಯತ್ನಿಸುತ್ತಿರುವ ಸಮಯದಲ್ಲಿ ಈ ಒಪ್ಪಂದ ಗಮನಾರ್ಹವೆನಿಸಿದೆ. ಶ್ರೀಲಂಕಾದ ಆಂತರಿಕ ಸಂಘರ್ಷದ ಹಿನ್ನೆಲೆಯಲ್ಲಿ ಭಾರತವು ಶಾಂತಿಪಾಲನಾ ಪಡೆಯನ್ನು ಕಳುಹಿಸಿದ ನಾಲ್ಕು ದಶಕಗಳ ಬಳಿಕ ಈ ವಿದ್ಯಮಾನ ನಡೆದಿದ್ದು, ಜಾಗತಿಕ ಗಮನ ಸೆಳೆದಿದೆ.

ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ ಮೋದಿಯವರನ್ನು ಶ್ರೀಲಂಕಾ ರಾಜಧಾನಿಯ ಐತಿಹಾಸಿಕ ಸ್ವಾತಂತ್ರ್ಯ ಚೌಕದಲ್ಲಿ ಅಧ್ಯಕ್ಷ ದಿಸ್ಸನಾಯಕೆ ಅವರೇ ಅದ್ದೂರಿಯಾಗಿ ಸ್ವಾಗತಿಸಿದ್ದು; ಮೋದಿಯವರಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಗೌರವವಾದ ‘ಮಿತ್ರ ವಿಭೂಷಣ’ವನ್ನು ಪ್ರದಾನ ಮಾಡಿದ್ದು- ಇವೆಲ್ಲ ಭಾರತಕ್ಕೆ ಶ್ರೀಲಂಕಾ ನೀಡಿದ ಆದ್ಯತೆಯ ದ್ಯೋತಕ ಎಂದು ವಿಶ್ಲೇಷಿಸಲಾಗಿದೆ. ‘ನಮ್ಮ ಭದ್ರತಾ ಆಸಕ್ತಿಗಳು ಸಾಮ್ಯತೆ ಹೊಂದಿವೆ. ಎರಡೂ ರಾಷ್ಟ್ರಗಳ ಭದ್ರತೆ ಅಂತರ್ ಸಂಬಂಧ ಹೊಂದಿದ್ದು, ಪರಸ್ಪರ ಅವಲಂಬಿತವಾಗಿವೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಭಾರತದ ಭದ್ರತಾ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಪ್ರತಿಕೂಲವಾಗಿ ಶ್ರೀಲಂಕಾದ ಪ್ರದೇಶವನ್ನು ಬಳಸಲು ಅವಕಾಶ ನೀಡುವುದಿಲ್ಲ’ ಎಂಬುದಾಗಿ ಲಂಕಾ ಅಧ್ಯಕ್ಷ ದಿಸ್ಸನಾಯಕೆ ಭರವಸೆ ನೀಡಿರುವುದು, ಚೀನಾ ಪ್ರಯತ್ನಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಭಾರತ-ಶ್ರೀಲಂಕಾ ಮಧ್ಯೆ ತ್ರಿಸೇವಾ ಅಧಿಕಾರಿಗಳ ವಿನಿಮಯ, ಜಂಟಿ ತರಬೇತಿ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿನ ಸಹಕಾರ ಸೇರಿ ಒಟ್ಟು ಏಳು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಚೀನಾವು ತನ್ನ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್ (ಬಿಆರ್​ಐ) ಮೂಲಕ ಕಳೆದ ಹತ್ತು ವರ್ಷಗಳಲ್ಲಿ ಶ್ರೀಲಂಕಾದಲ್ಲಿ ತನ್ನ ಆರ್ಥಿಕ ಮತ್ತು ಸೇನಾ ಪ್ರಭಾವವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ; ಮೂಲಸೌಕರ್ಯ ರಂಗದಲ್ಲಿ ಹೂಡಿಕೆ ಮಾಡಿದೆ. ಶ್ರೀಲಂಕಾ 2022ರ ಹೊತ್ತಿಗೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಿತ್ತು. ಆ ಸಂದರ್ಭದಲ್ಲಿ ಆರ್ಥಿಕ ಹಾಗೂ ವಸ್ತುಗಳ ನೆರವಿನ ಮೂಲಕ ಭಾರತ ಲಂಕಾದತ್ತ ಸಹಕಾರಹಸ್ತ ಚಾಚಿತ್ತು. ಚೀನಾ ಆ ದೇಶಕ್ಕೆ ಹೆಚ್ಚಿನ ಮೊತ್ತದ ಸಾಲ ನೀಡಿತ್ತು. ಲಂಕಾದಲ್ಲಿ ಚೀನಾ ಪ್ರಭಾವ ಹೆಚ್ಚಳ ಭಾರತಕ್ಕೆ ಎಂದಿದ್ದರೂ ಬೆದರಿಕೆಯೇ ಸರಿ.

ಈ ಹಿನ್ನೆಲೆಯಲ್ಲಿ ಮೋದಿ ಹಾಗೂ ದಿಸ್ಸನಾಯಕೆ ಮಾತುಕತೆ ಹಾಗೂ ಒಡಂಬಡಿಕೆಗಳಿಗೆ ಹೆಚ್ಚು ಮಹತ್ವವಿದೆ. ಆದರೆ, ಈ ಬೆಳವಣಿಗೆ ತನ್ನ ಪ್ರಾದೇಶಿಕ ಮಹತ್ವಾಕಾಂಕ್ಷೆಗಳಿಗೆ ಸವಾಲು ಎಂದು ಚೀನಾ ಭಾವಿಸುವ ಸಾಧ್ಯತೆ ಇದ್ದೇ ಇದೆ. ಈಗಾಗಲೇ ಆ ದೇಶವನ್ನು ತನ್ನ ನೆಲದೊಳಕ್ಕೆ ಬಿಟ್ಟುಕೊಂಡಿರುವ ಶ್ರೀಲಂಕಾವು ಭಾರತದೊಂದಿಗಿನ ಒಪ್ಪಂದಕ್ಕೆ ಪ್ರಾಮಾಣಿಕವಾಗಿ ಬದ್ಧವಾಗಿರುತ್ತದೆ ಎಂದು ಭರವಸೆ ಇಟ್ಟುಕೊಂಡರೂ, ಚೀನಾದ ಮುಂದಿನ ನಡೆಯತ್ತ ಭಾರತವೂ ಕಣ್ಣಿಡಬೇಕಾದುದು ಅನಿವಾರ್ಯ.