ದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಇವರ ಪ್ರತಿಸ್ಪರ್ಧಿ ಶಶಿ ತರೂರ್ ಅವರು ಖರ್ಗೆಗೆ ಅಭಿನಂದನೆ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮೂಲಕ ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿ ಹೊತ್ತ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಟ್ವೀಟ್ ಮಾಡಿರುವ ಶಶಿ ತರೂರ್, ನನ್ನನ್ನೂ ಬೆಂಬಲಿಸಿದ 1000ಕ್ಕೂ ಸಹೋದ್ಯೋಗಿಗಳಿಗೆ ಧನ್ಯವಾದ ಎಂದಿದ್ದಾರೆ. ಖುದ್ದಾಗಿ ಖರ್ಗೆ ಅವರನ್ನ ಭೇಟಿ ಮಾಡಿ ಅಭಿನಂದಿಸುವೆ ಎಂದೂ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಅ.17ರಂದು ಚುನಾವಣೆ ನಡೆದಿತ್ತು. ಮತಾಧಿಕಾರ ಪಡೆದಿದ್ದ ಒಟ್ಟು 9100 ಮಂದಿ ಪೈಕಿ ಶೇ.96 ಪ್ರದೇಶ ಕಾಂಗ್ರೆಸ್ ಮುಖಂಡರು ಮತದಾನ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ನಡೆದ ಹಣಾಹಣಿಯಲ್ಲಿ 6825 ಮತಗಳ ಅಂತರದಲ್ಲಿ ಖರ್ಗೆ ಗೆಲುವಿನ ನಗೆ ಬೀರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆಯುವ ಮೂಲಕ ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ, ಎದುರಾಳಿ ಅಭ್ಯರ್ಥಿ ಶಶಿ ತರೂರ್ 1072 ಮತ ಪಡೆದು ಪರಾಭವಗೊಂಡರು. ಚಲಾಣೆಯಾದ ಮತಗಳ ಪೈಕಿ 400 ಮತಗಳು ತಿರಸ್ಕೃತಗೊಂಡಿವೆ.
ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದಿಂದ ಆಯ್ಕೆಯಾದವರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 2ನೇಯವರು. 1968ರಲ್ಲಿ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.