ಶ್ರೀ ಗೋಕರ್ಣನಾಥೇಶ್ವರ ಕಾಲೇಜಿಲ್ಲಿ ತುಳು ವಿಚಾರಗೋಷ್ಠಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉದ್ಘಾಟಿಸಿದರು. ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ವಸಂತ ಕಾರಂದೂರು, ಡಾ.ತುಕಾರಾಮ ಪೂಜಾರಿ ಮೊದಲಾದವರಿದ್ದರು. 
ನ್ಯೂಸ್

ಯುವಜನರಿಗೆ ತುಳುನಾಡಿನ ಸಂಸ್ಕೃತಿ ಪರಿಚಯ

ಪ್ರಮುಖ ಮುಖ್ಯಾಂಶಗಳು

  • ತುಳು ವಿಚಾರಗೋಷ್ಠಿಯಲ್ಲಿ ಪದ್ಮರಾಜ್ ಆರ್. ಪೂಜಾರಿ ಕರೆ
  • ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಆಶ್ರಯದಲ್ಲಿ ಆಯೋಜನೆ
  • ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಅವರಿಗಎ ಸನ್ಮಾನ
ಮಂಗಳೂರು: ತುಳುನಾಡಿನ ಸಾಂಸ್ಕೃತಿಕ ಪರಂಪರೆ ವಿಶೇಷವಾಗಿದ್ದು, ದೈವರಾಧನೆ, ಯಕ್ಷಗಾನ, ಕಂಬಳ ಮೊದಲಾದವುಗಳು ತುಳುನಾಡಿನ ಸಂಸ್ಕೃತಿಯ ಹಿರಿಮೆಯಾಗಿದೆ. ಯುವಜನರಿಗೆ ತುಳುನಾಡಿನ ಇತಿಹಾಸ, ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಆಶ್ರಯದಲ್ಲಿ ಮಂಗಳವಾರ ತುಳು ಇತಿಹಾಸ ಮತ್ತು ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಲೇಖಕ ಹಾಗೂ ಅಧ್ಯಾಪಕ ಅರವಿಂದ ಚೊಕ್ಕಾಡಿ, 1837ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಅಮರ ಸುಳ್ಯ ಹೋರಾಟದ ಬಗ್ಗೆ ಮಾತನಾಡಿ, ಎಲ್ಲಾ ಸಮುದಾಯದ ಜನರ ಒಗ್ಗೂಡಿಕೆಯಿಂದ ತುಳುನಾಡಿನವರು ಹಾಗೂ ಕೊಡಗಿನವರು ಒಗ್ಗಟ್ಟಿನಿಂದ ಹೋರಾಟ ಸಂಘಟಿಸಿದ್ದರು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಸಂತ ಕಾರಂದೂರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ, ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಶೇಖರ್ ಪೂಜಾರಿ, ಕಾಲೇಜು ಆಡಳಿತ ಮಂಡಳಿ ಸದಸ್ಯ ಚಂದನ್ ದಾಸ್, ಆಡಳಿತ ಅಧಿಕಾರಿ ನಾಗೇಶ್ ಕರ್ಕೇರ, ಡಾ.ಯತೀನ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಘುರಾಜ್ ಕದ್ರಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಮಂಗಳೂರು ಭೇಟಿ ತುಳುನಾಡಿನ ಚರಿತ್ರೆಯಲ್ಲಿ ಐತಿಹಾಸಿಕ ಮಹತ್ವವಾದದ್ದು.

— ತಾರಾನಾಥ ಗಟ್ಟಿ ಕಾಪಿಕಾಡ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ