ನ್ಯೂಸ್

ಮತಭಾರತ ಲೋಕಸಭಾ ಚುನಾವಣೆ 2024: ಬಿಸಿಲೂರಿನಲ್ಲಿ ಅಭ್ಯರ್ಥಿಗಳಿಗೆ ಹುಡುಕಾಟ

| ಶಿವಮೂರ್ತಿ ಹಿರೇಮಠ, ರಾಯಚೂರು

ರಾಜ್ಯಕ್ಕೆ ವಿದ್ಯುತ್, ಚಿನ್ನ, ಸೋನಾಮಸೂರಿ ಅಕ್ಕಿ ನೀಡುವ ರಾಯಚೂರು ಲೋಕಸಭಾ ಕ್ಷೇತ್ರ ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿದೆ. ಕ್ಷೇತ್ರ ವ್ಯಾಪ್ತಿಯ ರಾಯಚೂರು, ಯಾದಗಿರಿಯನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಗುರುತಿಸಿದ್ದರೂ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ. ಈ ಬಾರಿ ಏಮ್ಸ್ ಮಂಜೂರು ವಿಚಾರ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್, ಬಿಜೆಪಿ ನಡುವೆ ಹಣಾಹಣಿ ಇದೆ.

ರಾಯಚೂರು ಲೋಕಸಭಾ ಕ್ಷೇತ್ರವೀಗ ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿದಿಲ್ಲ. ಇದುವರೆಗೆ ನಡೆದ 17 ಚುನಾವಣೆಯಲ್ಲಿ ಎರಡು ಬಾರಿ ಬಿಜೆಪಿ, ತಲಾ ಒಂದು ಬಾರಿ ಜನತಾದಳ ಗೆಲುವು ಸಾಧಿಸಿದ್ದು ಬಿಟ್ಟರೆ, ಉಳಿದೆಲ್ಲ ಚುನಾವಣೆಗಳಲ್ಲಿ್ಲ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಈ ಬಾರಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಇನ್ನು ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾಗಲಿದ್ದಾರೆಂಬ ಮಾತುಗಳಿವೆ. ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ನಾಯಕ ಸಮುದಾಯದವರ ನಡುವೆ ಕದನ ನಡೆಯುವುದು ನಿಶ್ಚಿತ. ರಾಯಚೂರು ಜಿಲ್ಲೆಯ ಐದು ಮತ್ತು ಯಾದಗಿರಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿ ದೊಡ್ಡದಾಗಿದೆ. ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್, ಎರಡರಲ್ಲಿ ಬಿಜೆಪಿಯ ಮತ್ತು ಒಂದರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕ್ಷೇತ್ರವು ಎಸ್ಟಿಗೆ ಮೀಸಲಾಗುವ ಮುಂಚೆಯೂ ನಾಯಕ ಜನಾಂಗಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್ಟಿಗೆ ಮೀಸಲಾದ ನಂತರದಲ್ಲಿ ನಾಯಕ ಸಮುದಾಯವರೇ ಸ್ಪರ್ಧಿಸಿದ್ದಾರೆ. ಅರಕೇರಾದ ವೆಂಕಟೇಶ ನಾಯಕ 4 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದು ವಿಶೇಷ.

ಪಕ್ಷಾಂತರ ಪರ್ವ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಈಗ ಅವರನ್ನು ಕರೆತಂದು ಅಭ್ಯರ್ಥಿಯನ್ನಾಗಿ ಮಾಡುವ ಪ್ರಯತ್ನ ಕಾಂಗ್ರೆಸ್​ನಲ್ಲಿ ನಡೆಯುತ್ತಿವೆ. ಆದರೆ, ಪಕ್ಷದಲ್ಲಿ ಬಿ.ವಿ.ನಾಯಕ ಎದುರಾಳಿ ಗುಂಪೊಂದು ಇದನ್ನು ತಡೆಯುವ ಯತ್ನವನ್ನೂ ನಡೆಸಿದೆ. ಆಂತರಿಕವಾಗಿ ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರನ್ನೂ ಕಾಂಗ್ರೆಸ್​ಗೆ ಕರೆತರುವ ಯತ್ನ ನಡೆದಿವೆ. ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ, ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ರವಿ ಪಾಟೀಲ್, ಮಾಜಿ ಶಾಸಕ ರಾಜಾ ರಾಯಪ್ಪ ನಾಯಕರು ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದಾರೆ.

ಯಾರಿಗೆ ವೆುೖತ್ರಿ ಟಿಕೆಟ್?

ಬಿಜೆಪಿ-ಜೆಡಿಎಸ್ ಮೈತ್ರಿ ಕಾರಣದಿಂದ ಆ ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ಹಣಾಹಣಿ ನಡೆಯಲಿದೆ. ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರನ್ನು ಕೈಬಿಟ್ಟು ಬೇರೆಯವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದ ಮಾಜಿ ಸಂಸದ ಬಿ.ವಿ.ನಾಯಕ ಹಾಗೂ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸುರಪುರದ ಮಾಜಿ ಶಾಸಕ ರಾಜುಗೌಡ ಅವರನ್ನು ಕಣಕ್ಕಿಳಿಸಲು ಪಕ್ಷದಲ್ಲಿ ಚಿಂತನೆ ನಡೆಸಲಾಗುತ್ತಿದೆ. ಜತೆಗೆ ಬಿ.ಶ್ರೀರಾಮುಲು ಅವರನ್ನು ಕರೆತರುವ ಪ್ರಯತ್ನಗಳೂ ನಡೆದಿವೆ.

ಸದನದಲ್ಲಿ ಹಾಜರಾತಿ

ಸದನದಲ್ಲಿ 490 ಪ್ರಶ್ನೆಗಳನ್ನು ಕೇಳಿದ ಹೆಗ್ಗಳಿಕೆ ಜತೆಗೆ ಶೇ.78.26 ಹಾಜರಾತಿಯನ್ನು ರಾಜಾ ಅಮರೇಶ್ವರ ನಾಯಕ ಹೊಂದಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಜನರಿಂದ ದೂರವಿರುವುದು ಅವರಿಗೆ ಮೈನಸ್ ಪಾಯಿಂಟ್.

ಮತ ಲೆಕ್ಕಾಚಾರ

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿಯಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 1,17,716 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ರಾಜಾ ಅಮರೇಶ್ವರ ನಾಯಕ 5.98 ಲಕ್ಷ ಮತ ಪಡೆದಿದ್ದರೆ, ಕಾಂಗ್ರೆಸ್​ನ ಬಿ.ವಿ.ನಾಯಕ 4.80 ಲಕ್ಷ ಮತ ಪಡೆದಿದ್ದರು. ಆಗ ಎದುರಾಳಿಗಳಾಗಿದ್ದ ಅಮರೇಶ್ವರ ನಾಯಕ ಮತ್ತು ಬಿ.ವಿ.ನಾಯಕ ಈಗ ಒಂದೇ ಪಕ್ಷದಲ್ಲಿರುವುದು ವಿಶೇಷ.

ಪ್ರಭಾವ ಬೀರುವ ಅಂಶಗಳು

ಈ ಬಾರಿಯ ಚುನಾವಣೆಯಲ್ಲಿ ಮೋದಿ ಗ್ಯಾರಂಟಿ ಮತ್ತು ರಾಜ್ಯ ಸರ್ಕಾರದ ಕಾಂಗ್ರೆಸ್ ಗ್ಯಾರಂಟಿಗಳು ಪ್ರಮುಖ ವಿಚಾರಗಳಾಗಿವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣ, ಪ್ರಧಾನಿ ನರೇಂದ್ರ ಮೋದಿ ಮರು ಆಯ್ಕೆ ವಿಚಾರವನ್ನು ಬಿಜೆಪಿ ಪ್ರಮುಖ ಅಸ್ತ್ರವನ್ನಾಗಿಸಿದೆ. ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. ಎರಡೂ ಪಕ್ಷಗಳು ಯಾರಿಗೆ ಟಿಕೆಟ್ ನೀಡಿದರೂ ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ವರ್ಚಸ್ಸು ಹೆಚ್ಚಿನ ಕೆಲಸ ಮಾಡಲಿದೆ. ಒಟ್ಟಾರೆ ಎರಡು ಪಕ್ಷಗಳಲ್ಲಿ ಟಿಕೆಟ್​ಗಾಗಿ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದ್ದು, ಬಿಜೆಪಿಯಲ್ಲಿ ಹಾಲಿ-ಮಾಜಿ ಸಂಸದರ ನಡುವೆ ಟಿಕೆಟ್​ಗಾಗಿ ಫೈಟ್ ನಡೆದಿದ್ದರೆ, ಗೆಲ್ಲುವ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್ ನಿರತವಾಗಿದೆ.

ರಾಜಾ ಅಮರೇಶ್ವರ ನಾಯಕ, ರಾಯಚೂರುಪ್ರಭಾವ ಬೀರುವ ಅಂಶಗಳು : ಈ ಬಾರಿಯ ಚುನಾವಣೆಯಲ್ಲಿ ಮೋದಿ ಗ್ಯಾರಂಟಿ ಮತ್ತು ರಾಜ್ಯ ಸರ್ಕಾರದ ಕಾಂಗ್ರೆಸ್ ಗ್ಯಾರಂಟಿಗಳು ಪ್ರಮುಖ ವಿಚಾರಗಳಾಗಿವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣ, ಪ್ರಧಾನಿ ನರೇಂದ್ರ ಮೋದಿ ಮರು ಆಯ್ಕೆ ವಿಚಾರವನ್ನು ಬಿಜೆಪಿ ಪ್ರಮುಖ ಅಸ್ತ್ರವನ್ನಾಗಿಸಿದೆ. ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. ಎರಡೂ ಪಕ್ಷಗಳು ಯಾರಿಗೆ ಟಿಕೆಟ್ ನೀಡಿದರೂ ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ವರ್ಚಸ್ಸು ಹೆಚ್ಚಿನ ಕೆಲಸ ಮಾಡಲಿದೆ. ಒಟ್ಟಾರೆ ಎರಡು ಪಕ್ಷಗಳಲ್ಲಿ ಟಿಕೆಟ್​ಗಾಗಿ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದ್ದು, ಬಿಜೆಪಿಯಲ್ಲಿ ಹಾಲಿ-ಮಾಜಿ ಸಂಸದರ ನಡುವೆ ಟಿಕೆಟ್​ಗಾಗಿ ಫೈಟ್ ನಡೆದಿದ್ದರೆ, ಗೆಲ್ಲುವ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್ ನಿರತವಾಗಿದೆ.