ನ್ಯೂಸ್

ಯೂಕ್ರೇನ್​ನಲ್ಲಿ ರಷ್ಯಾ ದಾಳಿಗೆ ​ಹಾವೇರಿ ಯುವಕ ಬಲಿ: ಮೃತನ ತಂದೆಗೆ ಕರೆ ಮಾಡಿ ಸಿಎಂ ಸಾಂತ್ವನ

ಹಾವೇರಿ: ಯುದ್ಧಪೀಡಿತ ಯೂಕ್ರೇನ್​ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ, ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡರ ದುರಂತ ಅಂತ್ಯ ಕಂಡ ಸುದ್ದಿ ಆಘಾತ ಉಂಟುಮಾಡಿದೆ. ಮಗನನ್ನು ಡಾಕ್ಟರ್​ ಮಾಡಿಸುವ ಕನಸು ಹೊತ್ತು ಯೂಕ್ರೇನ್​ಗೆ ವಿದ್ಯಾಭ್ಯಾಸಕ್ಕೆಂದು ಕಳಿಸಿದ್ದ ಪಾಲಕರಿಗೀಗ ಮಗನ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಈ ಸುದ್ಧಿ ತಿಳಿಯುತ್ತಿದ್ದಂತೆ ಮೃತನ ತಂದೆಗೆ ಸಿಎಂ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ನವೀನ ಅವರ ಶೇಖರಗೌಡ ಅವರಿಗೆ ಕರೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದು ನಿಜಕ್ಕೂ ದೊಡ್ಡ ದುರಂತ. ದೇವರು ನವೀನರ ಆತ್ಮಕ್ಕೆ ಶಾಂತಿ ನೀಡಲಿ. ನೀವು ಧೈರ್ಯದಿಂದ ಇರಬೇಕು. ನವೀನನ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮಗನನ್ನು ಕಳೆದುಕೊಂಡ ನೋವಲ್ಲೇ ಸಿಎಂ ಜತೆ ಮಾತನಾಡಿದ ಶೇಖರಗೌಡ, ಇಂದು ಮುಂಜಾನೆ ನನ್ನ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿ ದಿನ ಎರಡ್ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ. ಆದರೀಗ... ಎನ್ನುತ್ತಲೇ ಕಣ್ಣೀರಿಟ್ಟರು.