ಹಾವೇರಿ: ಯುದ್ಧಪೀಡಿತ ಯೂಕ್ರೇನ್ನಲ್ಲಿ ಶೆಲ್ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಮೃತ ದುರ್ದೈವಿ. ಕಾರ್ಕಿವ್ ನಗರದಲ್ಲಿ ನವೀನ ಎಂಬಿಬಿಎಸ್ ಓದುತ್ತಿದ್ದ. ಉಕ್ರೇನ್ ಮೇಲೆ ರಷ್ಯಾ ಸೇನಾಪಡೆ ಯುದ್ಧ ಮುಂದುವರಿಸಿದ್ದು, ಮಂಗಳವಾರ ಬೆಳಗ್ಗೆ ಕಾರ್ಕಿವ್ ನಗರದ ಕಟ್ಟದ ಮೇಲೆ ಶೆಲ್ ದಾಳಿ ಉಡಾಯಿಸಲಾಗಿದೆ. ರಷ್ಯಾ ಸೇನೆ ಶೆಲ್ ದಾಳಿ ನಡೆಸಿ ಕಟ್ಟಡವನ್ನ ದ್ವಂಸ ಮಾಡಿದ್ದು, ಆ ಕಟ್ಟಡದ ಬಳಿ ಇದ್ದ ನವೀನ್ ಗ್ಯಾನಗೌಡರ ಕೂಡ ಮೃತಪಟ್ಟಿದ್ದಾನೆ.
ಈತನ ಸಾವಿನ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಭಾರತೀಯ ರಾಯಭಾರಿ ಕಚೇರಿ ಜತೆ ದೂರವಾಣಿ ಮೂಲಕ ಮೃತನ ಸಹೋದರ ಮಾತುಕತೆ ನಡೆಸಿದ್ದು, ಶೆಲ್ ದಾಳಿಯಲ್ಲಿ ನವೀನ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಯೂಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದಾಗಿನಿಂದ ಮಗ ಹುಟ್ಟೂರಿಗೆ ಸುರಕ್ಷಿತವಾಗಿ ಬಂದ್ರೆ ಸಾಕಪ್ಪ ಎಂದು ಪಾಕಲರು-ಕುಟುಂಬಸ್ಥರು ಕಣ್ಣೀರು ಹಾಕುತ್ತಾ ದೇವರ ಬಳಿ ಲೆಕ್ಕವಿಲ್ಲದಷ್ಟು ಬಾರಿ ಬೇಡಿಕೊಂಡಿದ್ದರು. ಆದರೂ ಮಗ ಬದುಕಲಿಲ್ಲ ಎಂಬ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನವೀನನ ಸಾವಿನ ಸುದ್ದಿ ಕೇಳಿ ಆತನ ಮನೆಗೆ ಸಂಬಂಧಿಕರು, ಗ್ರಾಮಸ್ಥರು ದೌಡಾಯಿಸಿದ್ದಾರೆ. ನಮ್ಮ ಮಕ್ಕಳನ್ನು ಕರೆಸುವಲ್ಲಿ ಕೇಂದ್ರ ಸಚಿವಾಲಯ ವಿಫಲವಾಗಿದೆ. ನಮ್ಮ ಮಕ್ಕಳು ಸತ್ತು ಹೋದ್ರು, ಇದಕ್ಕೆ ಯಾರು ಹೊಣೆ? ನಾವು ಯಾರಿಗೆ ಸಂಪರ್ಕಿಸಲು ಕರೆ ಮಾಡಿದ್ರೂ ಸಿಕ್ತಾ ಇಲ್ಲಾ ಎಂದು ಆಕ್ರೋಶ ಹೊರ ಹಾಕಿದ್ದಾರೆ.