ತ್ರಿಪುರ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ನೀವು ಭಾವಿಸಿದರೆ, ನಿಮ್ಮ ಕಷ್ಟಗಳೆಲ್ಲ ಅದಕ್ಕೆ ಅಡ್ಡಿಯಾಗುವುದಿಲ್ಲ.
ಈ ಮಾತು ಲಾಕ್ಡೌನ್ ಸಂದರ್ಭದಲ್ಲಿ ಅನೇಕರಿಗೆ ಅನ್ವಯ ಆಗುತ್ತಿದೆ. ದಿನಗೂಲಿ ಕೆಲಸಗಾರರು, ವಲಸೆ ಕಾರ್ಮಿಕರು ಒಪ್ಪತ್ತಿನ ಊಟಕ್ಕೆ ಕಷ್ಟ ಪಡುತ್ತಿದ್ದಾರೆ. ಅಂತಹವರಿಗೆ ಅನೇಕರು ತಮ್ಮ ಕೈಲಾದಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಉಳ್ಳವರು, ಇಲ್ಲದವರಿಗೆ ಸಹಾಯ ಹಸ್ತ ಚಾಚುವುದು ದೊಡ್ಡ ವಿಚಾರವಲ್ಲ. ಆದರೆ ತಾವೇ ಸ್ವತಃ ಆರ್ಥಿಕವಾಗಿ ದುರ್ಬಲರಾಗಿದ್ದರೂ, ಇದ್ದುದರಲ್ಲೇ ಕಷ್ಟದಲ್ಲಿರುವವರಿಗೂ ನೀಡೋಣ ಎಂಬ ಮನೋಭಾವದಿಂದ ಸಹಾಯ ಮಾಡುವುದು ನಿಜಕ್ಕೂ ಮಾದರಿ.
ತ್ರಿಪುರದ ಗೌತಮ್ ದಾಸ್ (51)ಎಂಬ ದಿನಗೂಲಿ ಕಾರ್ಮಿಕ ತನ್ನ ಗಳಿಕೆಯ ಹಣದಲ್ಲಿ ಮುಕ್ಕಾಲು ಭಾಗವನ್ನು ಲಾಕ್ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡಲು ಬಳಸಿದ್ದಾರೆ.
ಗೌತಮ್ ದಾಸ್ ಅವರು ಸೈಕಲ್ ರಿಕ್ಷಾ ಚಾಲಕ. ದಿನಕ್ಕೆ 200 ರೂಪಾಯಿ ಇವರ ಗಳಿಕೆ ಆಗಿತ್ತು. ಆ ಹಣದಲ್ಲೇ ಸುಮಾರು 10,000 ರೂಪಾಯಿ ಸಂಗ್ರಹಿಸಿದ್ದರು. ಕೂಡಿಟ್ಟ 10,000 ರೂಪಾಯಿಯಲ್ಲಿ 8000 ರೂಪಾಯಿಯನ್ನು ಬಡವರಿಗೆ ಅಕ್ಕಿ, ಬೇಳೆಗಳನ್ನು ನೀಡಲು ಬಳಸಿದ್ದಾರೆ.
ದಾಸ್ ಅವರ ಪತ್ನಿ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ತ್ರಿಪುರದ ಹಳ್ಳಿಯೊಂದರಲ್ಲಿ ಮಣ್ಣಿನ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ. ಮಕ್ಕಳು ಕೂಡ ಇವರೊಂದಿಗೆ ಇಲ್ಲ.
ಏಕಾಏಕಿ 21ದಿನ ದೇಶ ಲಾಕ್ಡೌನ್ ಆದಾಗ ದಾಸ್ ಅವರು ತೀವ್ರ ಚಿಂತೆಗೀಡಾಗಿದ್ದರು. ಅದರಲ್ಲೂ ಬಡವರು, ದಿನಗೂಲಿ ಕಾರ್ಮಿಕರ ಜೀವನ ಹೇಗೆ ಎಂದು ಚಿಂತಾಕ್ರಾಂತರಾಗಿದ್ದರು. ಬಳಿಕ ತನ್ನ ಬಳಿ ಇರುವುದರಲ್ಲೇ ಅವರಿಗೂ ಸಹಾಯ ಮಾಡಬೇಕು ಎಂದು ನಿರ್ಧಾರ ಮಾಡಿದರಂತೆ.
ನಾನೊಬ್ಬ ದಿನಗೂಲಿ ಕೆಲಸಗಾರ. ಲಾಕ್ಡೌನ್ನಿಂದ ನನ್ನ ಜೀವನ ಅಸ್ತವ್ಯಸ್ತ ಆಗುತ್ತದೆ ಎಂದಾದಮೇಲೆ ನನ್ನಂತಹ ಅದೆಷ್ಟೋ ಜನರ ಪಾಡು ಹೀಗೆ ಇರುತ್ತದೆ. ಅದೇ ಕಾರಣಕ್ಕೆ ಕೂಡಿಟ್ಟಿದ್ದ 10,000 ರೂ.ದಲ್ಲೇ ನನ್ನ ಕೈಲಾದಷ್ಟು ಜನರಿಗೆ ಸಹಾಯ ಮಾಡಲು ಮುಂದಾದೆ ಎಂದು ದಾಸ್ ತಿಳಿಸಿದ್ದಾರೆ.
ಅಕ್ಕಿ, ಬೇಳೆಗಳ ಸಣ್ಣಸಣ್ಣ ಪ್ಯಾಕೇಟ್ ಮಾಡಿ ತಮ್ಮ ಸೈಕಲ್ ರಿಕ್ಷಾದಲ್ಲಿ ಇಟ್ಟುಕೊಂಡು ಬಡಜನರ ಮನೆಗೆ ಹೋಗಿ ವಿತರಿಸುತ್ತಿದ್ದಾರೆ. ಅವರು ಹಣವನ್ನೂ ಪಡೆಯುತ್ತಿಲ್ಲ. ಇದುವರೆಗೆ 160 ಬಡ ಕುಟುಂಬಗಳಿಗೆ ಅಕ್ಕಿ, ಬೇಳೆ ವಿತರಿಸಿದ್ದಾರೆ. (ಏಜೆನ್ಸೀಸ್)