ಮಳವಳ್ಳಿ : ಕಾಶಿಯಾತ್ರೆಗೆ ತೆರಳಿದ್ದ ತಾಲೂಕಿನ ಹಲಗೂರು ಗ್ರಾಮದ ನಿವೃತ್ತ ಶಿಕ್ಷಕ ನಾಗೇಶ್(70) ರೈಲ್ವೆ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಮೈಸೂರಿನ ಜೆ.ಪಿ.ನಗರ ಬಡಾವಣೆಯಲ್ಲಿ ವಾಸವಿದ್ದ ಇವರು, ಸುಮಾರು 90 ಜನರ ತಂಡದೊಡನೆ ವಿವಿಧ ಯಾತ್ರಾ ಸ್ಥಳಗಳ ಪ್ರವಾಸಕ್ಕೆ ದಂಪತಿ ಸಮೇತ ತೆರಳಿದ್ದರು. ಪ್ರವಾಸ ಪೂರ್ಣಗೊಳಿಸಿ ಮೈಸೂರಿಗೆ ವಾಪಸಾಗಲು ಗುರುವಾರ ರಾತ್ರಿ ವಾರಣಾಸಿ ರೈಲ್ವೆ ನಿಲ್ದಾಣಕ್ಕೆ ಎಲ್ಲರೂ ಸೇರಿದ್ದರು.
ಈ ವೇಳೆ ನಾಗೇಶ್ ಅವರು ತಪ್ಪು ಗ್ರಹಿಕೆಯಿಂದ ಬೇರೆಡೆಗೆ ತೆರಳುತ್ತಿದ್ದ ರೈಲು ಹತ್ತಿದ್ದಾರೆ. ರೈಲು ಪ್ರಯಾಣ ಬೆಳೆಸಲು ಸಜ್ಜಾಗುತ್ತಿದ್ದಾಗ ತಮ್ಮವರೆಲ್ಲ ರೈಲ್ವೆ ಪ್ಲಾಟ್‌ಫಾರಂನಲ್ಲೇ ನಿಂತಿರುವುದನ್ನು ಗಮಿಸಿದ್ದಾರೆ. ಕೂಡಲೇ ಗಾಭರಿಯಿಂದ ಚಲನೆಯಲ್ಲಿದ್ದ ರೈಲಿನಿಂದ ಇಳಿಯುವ ತವಕದಲ್ಲಿ ಕಾಲುಜಾರಿ ಉರುಳಿಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಕೂಡಲೇ ವಾರಣಾಸಿಯ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಶನಿವಾರ ಬೆಂಗಳೂರಿಗೆ ವಿಮಾನದ ಮೂಲಕ ಮೃತದೇಹ ಸ್ವಗ್ರಾಮಕ್ಕೆ ತರಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ. ಈ ಸಂಬಂಧ ವಾರಣಾಸಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.