ನ್ಯೂಸ್

ನಿವೃತ್ತ ಐಎಎಸ್​ ಅಧಿಕಾರಿ, ಮಾಜಿ ಸಚಿವ ಅಲೆಕ್ಸಾಂಡರ್​ ನಿಧನ: ಸಿಎಂ ಸಂತಾಪ

ಬೆಂಗಳೂರು: ನಿವೃತ್ತ ಐಎಎಸ್​ ಅಧಿಕಾರಿ ಹಾಗೂ ಮಾಜಿ ಸಚಿವ ಡಾ. ಜೆ.ಅಲೆಗ್ಸಾಂಡರ್​(83) ನಿಧನರಾದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೆ ಶುಕ್ರವಾರ ಕೊನೆಯುಸಿರೆಳೆದರು. ಮೃತರಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು ಇದ್ದಾರೆ. ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನಲ್ಲಿ ನೆರವೇರಲಿದೆ.

ಕೇರಳದ ಕೊಲ್ಲಂ ಮೂಲದ ಅಲೆಗ್ಸಾಂಡರ್​, ಇಂಗ್ಲಿಷ್​ನಲ್ಲಿ ಎಂಎ ಪದವಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಪಿಎಚ್​ಡಿ ಪಡೆದಿದ್ದರು. ನಂತರ ಕೆಲ ಸಮಯ ಕೊಲ್ಲಂನಲ್ಲಿ ಇಂಗ್ಲಿಷ್​ ಅಧ್ಯಾಪಕರಾಗಿದ್ದರು. 1963ರಲ್ಲಿ ಐಎಎಸ್​ ಪಾಸಾದ ನಂತರ ಕರ್ನಾಟಕದಲ್ಲಿ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದರು. ರಾಜ್ಯದ ಮುಖ್ಯ ಕಾರ್ಯದಶಿರ್ಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿ ನಂತರ ಕಾಂಗ್ರೆಸ್​ ಮೂಲಕ ರಾಜಕೀಯ ಪ್ರವೇಶಿಸಿದ ಅಲೆಕ್ಸಾಂಡರ್​, 1999ರಲ್ಲಿ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಎಸ್​.ಎಂ.ಕೃಷ್ಣ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದರು. 2004ರಲ್ಲಿ ಸೋಲು ಅನುಭವಿಸಿದರು. ನಂತರ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದರೂ ರಾಜಕೀಯದಲ್ಲಿ ಸಕ್ರಿಯರಾಗಿರಲಿಲ್ಲ.

ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅಲೆಕ್ಸಾಂಡ್​ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ(ಶುಕ್ರವಾರ) ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಇವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. 'ಅಲೆಕ್ಸಾಂಡರ್ ಅವರು ಐಎಎಸ್ ಅಧಿಕಾರಿಯಾಗಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು. ನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ನಂತರ ಅವರು ರಾಜಕೀಯ ಕ್ಷೇತ್ರಕ್ಕೆ ಧುಮುಕಿ, ಚುನಾವಣೆಯಲ್ಲಿ ಗೆದ್ದು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರ ನಿಧನದ ಸುದ್ದಿ ನನಗೆ ಬೇಸರ ತರಿಸಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ನಿಧನದ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ' ಎಂದು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.