ನ್ಯೂಸ್

ಕಾರಿನಲ್ಲೇ ಗುಂಡು ಹಾರಿಸಿಕೊಂಡು ನಿವೃತ ಡೆಪ್ಯುಟಿ ತಹಸೀಲ್ದಾರ್ ಆತ್ಮಹತ್ಯೆ! ಡೆತ್​ನೋಟ್​ನಲ್ಲಿದೆ ಬೆಚ್ಚಿಬೀಳಿಸೋ ರಹಸ್ಯ

ಚಿಕ್ಕಮಗಳೂರು: ನಿವೃತ ಡೆಪ್ಯುಟಿ ತಹಸೀಲ್ದಾರ್​ವೊಬ್ಬರು ಕಾರಿನಲ್ಲಿ ಕುಳಿತುಕೊಂಡೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ತಾಲೂಕಿನ ಬೇಲೆನಹಳ್ಳಿ ತಾಂಡ್ಯದಲ್ಲಿ ಸಂಭವಿಸಿದೆ.

ಸೋಮನಾಯ್ಕ(72) ಆತ್ಮಹತ್ಯೆ ಮಾಡಿಕೊಂಡವರು. ಇಂದು ಮುಂಜಾನೆ ಕಾರಿನಲ್ಲಿ ತೋಟಕ್ಕೆ ಬಂದ ಸೋಮನಾಯ್ಕ ಅವರು ತೋಟದ ಕೋವಿಯಿಂದ ಗುಂಡು ಹಾರಿಸಿಕೊಂಡು ಸತ್ತಿದ್ದಾರೆ. ಕಾರಿನಲ್ಲಿ ಡೆತ್​ನೋಟ್ ಸಿಕ್ಕಿದೆ. ಸಾವಿಗೂ ಮುನ್ನ ಮನದ ಆತಂಕವನ್ನ ಅಕ್ಷರಕ್ಕಿಳಿಸಿದ್ದು, ಸಾವಿನ ಕಾರಣ ಏನಂತೆ ಗೊತ್ತಾ?

ಸೋಮನಾಯ್ಕ ಅವರಿಗೂ ಕರೊನಾ ಪಾಸಿಟಿವ್​ ಬಂದಿತ್ತು. ಇದಕ್ಕೆ ತೀವ್ರ ಆತಂಕಗೊಂಡ ಅವರು ಮನೆಯವರಿಗೂ ಸೋಂಕು ಹರಡುವ ಭೀತಿಯಲ್ಲಿ ಸಾವಿನ ಮನೆಯ ಕದ ತಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರೊನಾ ಸೋಂಕು ತಗುಲಿದೆ ಎಂಬ ವಿಷ್ಯ ಗೊತ್ತಾಗುತ್ತಿದ್ದಂತೆ ಕೆಲವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ನಿವೃತ ಡೆಪ್ಯುಟಿ ತಹಸೀಲ್ದಾರ್​ ಕೂಡ ಇದೇ ಹಾದಿ ಹಿಡಿದದ್ದು ಕರೊನಾ ಭೀತಿಯ ಭೀಕರತೆ ಅದೆಷ್ಟು ಕ್ರೂರವಾಗಿದೆ ಎಂದು ಹೇಳಲು ಅಸಾಧ್ಯ.