ಬೆಂಗಳೂರು:ರಿಯಲ್ ಎಸ್ಟೇಟ್ ಉದ್ಯಮಿ, ಕುಟುಂಬ ಸಮೇತ ಅಮರನಾಥ ಯಾತ್ರೆಗೆ ಹೋಗಿದ್ದಾಗ ಮನೆ ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಧರ್ಮಪುರಿ ಮೂಲದ ರಾಮಸ್ವಾಮಿ ಅಲಿಯಾಸ್ ಪದ್ಮನಾಭ ಬಂಧಿತ. 30 ಲಕ್ಷ ರೂ. ಮೌಲ್ಯದ 620 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.ಕೆಲ ದಿನಗಳ ಹಿಂದೆ ಚಿಕ್ಕಕಲ್ಲಸಂದ್ರದ ಸಾರ್ವಭೌಮನಗರದ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟೇಶ್, ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡವು, ಸಿಸಿ ಕ್ಯಾಮರಾ ದೃಶ್ಯಾವಳಿ ಮತ್ತು ತಾಂತ್ರಿಕ ಮಾಹಿತಿ ಆಧರಿಸಿ ಕಳ್ಳನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃತ್ತಿಪರ ಕ್ರಿಮಿನಲ್ ರಾಮಸ್ವಾಮಿ, 25 ವರ್ಷಗಳಿಂದ ಮನೆಗಳ್ಳತನ ಕೃತ್ಯದಲ್ಲಿ ತೊಡಗಿದ್ದಾನೆ. ರಾಮಸ್ವಾಮಿ ವಿರುದ್ಧ ಬನಶಂಕರಿ, ಸಿ.ಕೆ.ಅಚ್ಚುಕಟ್ಟು, ಸುಬ್ರಹ್ಮಣ್ಯನಗರ, ಮಡಿವಾಳ, ಗಿರಿನಗರ, ರಾಮಮೂರ್ತಿನಗರ, ಕುಮಾರಸ್ವಾಮಿ ಲೇಔಟ್ ಮತ್ತು ಸುಬ್ರಹ್ಮಣ್ಯಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಳೇ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಕಳ್ಳತನದಲ್ಲಿ ತೊಡಗಿದ್ದ.
ಚಿಕ್ಕಕಲ್ಲಸಂದ್ರ ಸಮೀಪದ ಸಾರ್ವಭೌಮನಗರದ ಬಿಲ್ಡರ್ ವೆಂಕಟೇಶ್, ಅಮರನಾಥ ಯಾತ್ರೆಗೆ ಹೋಗಿದ್ದರು. ಜು.7ರಂದು ಉದ್ಯಮಿ ಮನೆ ಬೀಗ ಮುರಿದು ಒಳನುಗ್ಗಿದ ಆರೋಪಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ. ಈ ಕೃತ್ಯದ ಖದೀಮನ ಬೆನ್ನಹತ್ತಿದ ಪೊಲೀಸರು, ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಬಂಧಿಸಿದ್ದಾರೆ.
ತಮಿಳುನಾಡಿನಿಂದ ಮನೆಗಳ್ಳತನ ಸಲುವಾಗಿ ನಗರಕ್ಕೆ ಬರುತ್ತಿದ್ದ ರಾಮಸ್ವಾಮಿ, ವಸತಿ ಪ್ರದೇಶಗಳಲ್ಲಿ ಓಡಾಡ ನಡೆಸುತ್ತಿದ್ದ. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುತ್ತಿದ್ದ. ಈ ಕೃತ್ಯ ಎಸಗಿದ ಬಳಿಕ ತಮಿಳುನಾಡಿಗೆ ಮರಳುತ್ತಿದ್ದ. ಕದ್ದ ಆಭರಣಗಳನ್ನು ವಿಲೇವಾರಿ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.