ನ್ಯೂಸ್

ಶುದ್ಧ ಹೃದಯ ಭಗವಂತನ ಆವಾಸ ಸ್ಥಾನ

ಯಾವುದೇ ವ್ರತ, ಪೂಜೆ, ಆರಾಧನೆ ಇತ್ಯಾದಿಗಳನ್ನು ಆರಂಭಿಸುವ ಮೊದಲು ಆಯಾ ಇಷ್ಟ ದೇವತೆಯನ್ನು ಹೃನ್ಮಂದಿರದಲ್ಲಿ ಮೊದಲು ಧ್ಯಾನಿಸಿ ನಂತರ ಪೂಜಾ ಪ್ರಕ್ರಿಯೆಗಳನ್ನು ಆರಂಭಿಸುವ ಪರಂಪರೆ ಇದೆ. ವ್ರತ, ಪೂಜೆ, ಆರಾಧನೆಯ ಮುನ್ನ ಆ ದೇವತೆ ಬಾಹ್ಯದಲ್ಲಲ್ಲ ಬದಲಾಗಿ ಹೃದಯ ಕಮಲದಲ್ಲಿ ವಿರಾಜಿಸುವಂತಹ ಸ್ಥಿತಿಯನ್ನು ಪೂಜಿಸುವವರು ಅನುಭವಿಸಬೇಕು. ಆದರೆ ಆಂತರ್ಯದ ಈ ಪೂಜೆಯು ಬಾಹ್ಯಾಡಂಬರಗಳಿಗೆ ಮೀಸಲಾಗುತ್ತಿದೆ. ಆರ್ಭಟ, ಕರ್ಕಶ ಧ್ವನಿಗಳ ಸಮ್ಮಿಲನ ಎಲ್ಲದರ ಜೊತೆ ತೋರ್ಪಡಿಕೆಯೇ ಮುಖ್ಯವಾಗಿ ಕಾಣಬರುತ್ತಿದೆ. ಪರಂಪರಾನುಗತವಾಗಿ ಸಹಸ್ರ ಸಹಸ್ರ ವರುಷಗಳಿಂದ ಪೂಜಿಸುವ ದೈವ ನಮ್ಮ ಹೃದಯ ಕಮಲದಲ್ಲಿ ವಿರಾಜಮಾನವಾಗಿದ್ದು ಪೂಜೆ, ವ್ರತದ ಸಂದರ್ಭದಲ್ಲಿ ಪೂಜಿಸುವವರ ಹೃನ್ಮಂದಿರದಲ್ಲಿ ಆ ದಿವ್ಯ ಶಕ್ತಿ ಸ್ಥಾಪಿತವಾಗಿ ನಂತರ ಬಾಹ್ಯ ಪೂಜಾ ವಿಧಿಗಳನ್ನು ನಡೆಸುವಂತಾದರೆ ಆ ಪೂಜೆ, ವ್ರತಕ್ಕೆ ಒಂದು ಅರ್ಥ ದೊರೆಯುತ್ತದೆ.

ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ಆ ದಿವ್ಯ ಪೂಜೆ, ಆರಾಧನೆಯನ್ನು ನಾವು ಆಳವಾಗಿ ಅಧ್ಯಯನ ಮಾಡಿದಾಗ ಕಂಡುಬರುವುದು ‘ಯದ್ ಭಾವಮ್ ತದ್ ಭವತಿ’ ಎನ್ನುವಂತೆ ಯಾವುದನ್ನು ನೆನೆಯುತ್ತೀಯೋ ಅದೇ ನೀನಾಗುತ್ತೀಯ, ಏನನ್ನು ಧ್ಯಾನಿಸಿ, ಪೂಜಿಸಿ, ಅರ್ಚಿಸಿ, ಭಜಿಸುತ್ತೇವೆಯೋ ಅದೇ ನಾವಾಗುತ್ತೇವೆ ಎಂಬುದು. ಇದಕ್ಕೆ ಜ್ವಲಂತ ಉದಾಹರಣೆ ಪರಮಹಂಸರು ದಕ್ಷಿಣೇಶ್ವರದ ಭವತಾರಿಣಿ ಮಂದಿರದಲ್ಲಿ ಜಗಜ್ಜನನಿಯನ್ನು ಅರ್ಚಿಸುವ ಪರಿ. ಇಲ್ಲಿ ನಿಜವಾದ ಅರ್ಥದಲ್ಲಿ ಪೂಜಾ ಕೈಂಕರ್ಯ ನೆರವೇರುತ್ತಿತ್ತು. ಕಾರಣ, ಹೃದಯ ಕಮಲದಲ್ಲಿ ವಿರಾಜಮಾನವಾಗಿರುವ ಭವತಾರಿಣಿಯನ್ನು ಅರ್ಚಿಸುತ್ತಿದ್ದ ರಾಮಕೃಷ್ಣರಿಗೆ ಬಾಹ್ಯದಲ್ಲಿಯೂ ಜಗಜ್ಜ ನನಿಯು ಗೋಚರಿಸುತ್ತಿದ್ದಳು.

ರಾಮಕೃಷ್ಣ ಪರಮಹಂಸರು ಭವತಾರಿಣಿಯ ಮಂದಿರದಲ್ಲಿ ಆಸೀನರಾಗಿ ಪೂಜೆಯನ್ನು ಆರಂಭಿಸಿದೊಡನೆಯೇ ಜಗಜ್ಜನನಿ ಅಲ್ಲಿ ವಿರಾಜಮಾನಳಾಗುತ್ತಿದ್ದಳು. ಇಲ್ಲಿ ರಾಮಕೃಷ್ಣರು ಕೇವಲ ಅರ್ಚಕನಾಗಿರುತ್ತಿರಲಿಲ್ಲ, ಅವರು ಕಾಣುತ್ತಿದ್ದುದ್ದು ಭಗವತಿಯ ಚಿನ್ಮಯ ರೂಪ! ಇದು ಹೇಗೆ ಸಾಧ್ಯ? ಹೃದಯದಲ್ಲಿ ಭಯಂಕರವಾದ ವಿಚಾರಗಳು, ಆಸೆ ಲಾಲಸೆಗಳ ಪರ್ವತವೇ ಸ್ಥಾಪಿತವಾಗಿರುತ್ತದೆ. ಭಗವಂತನನ್ನು ಹೃದಯದಲ್ಲಿ ಸ್ಥಾಪಿಸಿಕೊಳ್ಳಲು ಮೊದಲ ಹೆಜ್ಜೆಯೇ ಹೃದಯ ಶುದ್ಧಿ. ಭಗವಂತನು ಮೊದಲು ಹೃನ್ಮಂದಿರದಲ್ಲಿ ವಿರಾಜಿಸಬೇಕು. ತದನಂತರ ಬಾಹ್ಯದಲ್ಲಿ. ಶುದ್ಧ ಹೃದಯ ಭಗವಂತನ ಆವಾಸ ಸ್ಥಾನ. ಇದು ಪೂಜಾ, ವ್ರತ, ಆರಾಧನೆ, ಅರ್ಚನೆಗಳಿಗೆ ಇರಬೇಕಾದಂತಹ ಮೊದಲ ಹಂತ. ಈ ಅಂಶವನ್ನು ರಾಮಕೃಷ್ಣರಿಗೆ ಅರ್ಪಿಸಿದ ಒಂದು ಸ್ತೋತ್ರದಲ್ಲಿ ಸ್ವಾಮಿ ಅಭೇದಾನಂದಜೀ ಸ್ಪಷ್ಟವಾಗಿ ವಿವರಿಸುತ್ತಾರೆ: ‘ಹೃದಯ ಕಮಲ ಮಧ್ಯೇ ರಾಜಿತಂ ನಿರ್ವಿಕಲ್ಪಂ ಸದಸಿದಖಿಲಬೇಧಾತೀತಮೇಕ ಸ್ವರೂಪಂ||’ ಹೃದಯ ಕಮಲದಲ್ಲಿ ರಾರಾಜಿಸುತ್ತಿರುವ, ನಿಶ್ಚಯ ಸ್ವರೂಪನಾದ, ನಿಜವಾದ ಅಥವಾ ತೋರಿಕೆ ಭೇದಗಳಿಲ್ಲದ, ಏಕರೂಪನಾದ, ಪ್ರಕೃತಿ ವಿಕಾರಗಳಿಲ್ಲದವನಾದ, ನಿತ್ಯನಾದ, ಆನಂದಮೂರ್ತಿಯಾದ, ಪರಿಶುದ್ಧ ಪರಮಹಂಸನಾದ ರಾಮಕೃಷ್ಣದೇವನನ್ನು ಭಜಿಸುತ್ತೇನೆ’.

ಹೇಗೆ ಪರಮ ಪವಿತ್ರವಾದ ಹೃದಯವುಳ್ಳ ಆಂಜನೇಯ ಸ್ವಾಮಿ ಮರ್ಯಾದಾ ಪುರುಷೋತ್ತಮ ಎಲ್ಲಿರುವನು ಎಂದು ಪ್ರಶ್ನಿಸಿದಾಗ, ತನ್ನ ಹೃದಯವನ್ನೇ ತೆರೆದಾಗ ಅಲ್ಲಿ ಶ್ರೀರಾಮಚಂದ್ರ, ಸೀತಾದೇವಿ ವಿರಾಜಮಾನರಾಗಿರುತ್ತಾರೆಯೋ ಅದೇ ತೆರನಾಗಿ ಸದಾ ಭಕ್ತಿ, ಸ್ಮರಣೆ, ಪರಿಶುದ್ಧ ಭಾವನೆಯಿಂದ ಹೃದಯ ಶುದ್ಧಿಗೊಳಿಸಿ ಪ್ರಾರ್ಥಿಸಿದಾಗಲೇ ಅ ದಿವ್ಯ ಶಕ್ತಿ ಹೃನ್ಮಂದಿರದಲ್ಲಿ ವಿರಾಜಮಾನವಾಗುತ್ತದೆ. ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯನಾದ ಈಶಾನನಿಗೆ ಹೇಳಿದ ಕಥೆ ಗಮನಿಸಿ.

ಆ ಕಥೆಯ ಹೆಸರು - ಸಾಧುವಿನ ಹೃದಯ ಎಲ್ಲದಕ್ಕಿಂತ ದೊಡ್ಡದು ಎಂಬುದು. ಭೂಮಿ ದೊಡ್ಡದು, ಭೂಮಿಗಿಂತ ದೊಡ್ಡದು ಸಾಗರ, ಸಾಗರಕ್ಕಿಂತ ದೊಡ್ಡದು ಆಕಾಶ. ಆದರೆ ಭಗವಾನ್ ವಿಷ್ಣು ತನ್ನ ಒಂದು ಪಾದದಿಂದಲೇ ಸ್ವರ್ಗ, ಮರ್ತ್ಯ, ಪಾತಾಳ ಈ ತ್ರಿಭುವನಗಳನ್ನು ಅಳೆದು ಬಿಟ್ಟ. ಆದರೆ ಪರಮಾದ್ಭುತವಾದುದು ಎಂದರೆ ಸಾಧುವಿನ, ಸದ್ಭಕ್ತರ ಶುದ್ಧ ಹೃದಯ. ಅದರಲ್ಲಿದೆ ವಿಷ್ಣುವಿನ ಪಾದ. ಅಂದರೆ ಪವಿತ್ರವಾದ, ಶುದ್ಧವಾದ ಹೃದಯದಲ್ಲಿ ಆ ಅಖಿಲಕೋಟಿ ಬ್ರಹ್ಮಾಂಡ ನಾಯಕನು ವಿರಾಜಮಾನನಾಗಿದ್ದಾನೆ ಎಂದರ್ಥ. ಅಂತಹ ಶುದ್ಧ ಹೃದಯದಿಂದ ಜಪಿಸಿದರೆ ಖಂಡಿತ ಭಗವಂತ ಸ್ಥಾಪಿಸಲ್ಪಡುತ್ತಾನೆ. ಅದೇ ನಿಜವಾದ ಹೃನ್ಮಂದಿರವಾಗುತ್ತದೆ. ಎಲ್ಲ ಆಸೆ, ಆಕಾಂಕ್ಷೆ, ಅರಿಷಡ್ವರ್ಗಗಳಿಂದ ಮುಕ್ತನಾದಾಗಲೇ ಹೃದಯ ಶುದ್ಧಿಯಾಗುತ್ತದೆ. ಅಂತಹ ಪರಿಶುದ್ಧ ಹೃದಯವಂತರಿಂದ ಪೂಜೆ, ಅರ್ಚನೆ, ಆರಾಧನೆ, ನೆರವೇರಿದಾಗ ಭಗವಂತ ಪ್ರತ್ಯಕ್ಷ ರೂಪದಲ್ಲಿ ಪೂಜಾ ಕೈಂಕರ್ಯಗಳನ್ನು ಸ್ವೀಕರಿಸುತ್ತಾನೆ. ಪರಮಹಂಸರು ತಮ್ಮ ಭೋಧನೆಗಳಲ್ಲಿ ಅತ್ಯಂತ ಹೆಚ್ಚು ಒತ್ತು ನೀಡುತ್ತಿದ್ದುದು ಈ ಹೃದಯ ಶುದ್ಧಿಗೆ. ಭಗವಾನ್ ಶ್ರೀಕೃಷ್ಣನು ತಿಳಿಸಿದಂತೆ ಪತ್ರಂ ಪುಷ್ಪಂ ಫಲಂ ತೋಯಂ, ಒಂದು ತುಳಸೀದಳವನ್ನು ಭಕ್ತಿಯಿಂದ ಹೃದಯಶುದ್ಧಿಯಿಂದ ಅರ್ಪಿಸಿದರೆ ಸಾಕು ಆ ಭಗವಂತ ಕೃಪೆದೋರುತ್ತಾನೆ. ಇದೇ ಅಲ್ಲವೇ ನಿಜವಾದ ಅರ್ಥದಲ್ಲಿ ದೇವರ ಪೂಜೆ, ಅರ್ಚನೆ, ಆರಾಧನೆ.