ನ್ಯೂಸ್

ಸಂಭಾವನೆ ಪಡೆಯದೇ ಅಪ್ಪು ಅನೇಕ ಕೆಲಸ ಮಾಡ್ತಿದ್ರು.. ಪುನೀತ್​ರ ಆ ಜಾಗಕ್ಕೆ ಶಿವಣ್ಣ ಆಗ್ತಾರಾ ರಾಯಭಾರಿ?

| ಕಿರಣ್​ ಮಾದರಹಳ್ಳಿ ಚಾಮರಾಜನಗರ
ಚಾಮರಾಜನಗರ ಜಿಲ್ಲೆಯ ಮೇಲಿದ್ದ ಅಭಿಮಾನಕ್ಕಾಗಿ ನಟ ಪುನೀತ್​ ರಾಜ್​ಕುಮಾರ್​ ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದ "ಚೆಲುವ ಚಾಮರಾಜನಗರ'' ರಾಯಭಾರಿ ಸ್ಥಾನವನ್ನು ಶಿವರಾಜ್​ಕುಮಾರ್​ ಅಲಂಕರಿಸಬೇಕೆಂಬ ಕೂಗು ಅಭಿಮಾನಿಗಳ ವಲಯದಿಂದ ಕೇಳಿಬಂದಿದೆ.

ಜಿಲ್ಲಾಡಳಿತ "ಚೆಲುವ ಚಾಮರಾಜನಗರ'' ಯೋಜನೆಯನ್ನು ರೂಪುಗೊಳಿಸಿದೆ. ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳು, ಐತಿಹಾಸಿಕ ಹಿನ್ನೆಲೆಯುಳ್ಳ ಧಾರ್ಮಿಕ ಸ್ಥಳಗಳು, ವನ್ಯಸಂಪತ್ತನ್ನು ನಾಡಿನೆಲ್ಲೆಡೆ ಪರಿಚಯಿಸಲು ಬ್ರಾಂಡ್​ ಅಂಬಾಸಿಡರ್​ ಆಯ್ಕೆ ಮಾಡಿತ್ತು. ಪುನೀತ್​ ರಾಜ್​ಕುಮಾರ್​ ಸಂಭಾವನೆ ಪಡೆಯದೆ ಸರ್ಕಾರದ ಹಲವು ಕಾರ್ಯಕ್ರಮಗಳ ರಾಯಭಾರಿಯಾಗಿದ್ದರು. ಗಾಜನೂರಿನ ಮೊಮ್ಮಗನಾದ ಅಪ್ಪುಗೆ ತವರು ಜಿಲ್ಲೆಯ ಮೇಲೆ ವಿಶೇಷ ಅಕ್ಕರೆ ಇತ್ತು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಸುರೇಶ್​ಕುಮಾರ್​ ಮತ್ತು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರ ಕೋರಿಕೆ ಮೇರೆಗೆ "ಚೆಲುವ ಚಾಮರಾಜನಗರ''ದ ರಾಯಭಾರಿಯಾಗಲು ಪುನೀತ್​ ಒಪ್ಪಿಕೊಂಡಿದ್ದರು.

ಸಂದೇಶ ನೀಡಿದ್ದ ರಾಯಭಾರಿ
"ಬನ್ನಿ ಹುಲಿಗಳ ನಾಡಿನ ಅನುಭವ ಪಡೆಯೋಣ, ಹೊಸ ಚಾಮರಾಜನಗರವನ್ನು ಅನ್ವೇಷಿಸೋಣ'' ಎಂದು ನಟ ಪುನೀತ್​ ರಾಜ್​ಕುಮಾರ್​ ಸಂದೇಶ ನೀಡಿದ್ದರು. ಜಿಲ್ಲಾಡಳಿತ "ಚೆಲುವ ಚಾಮರಾಜನಗರ''ದ ಭಾಗವಾಗಿ "ಹುಲಿಗಳ ನಾಡು ಚಾಮರಾಜನಗರ'' ಎಂಬ 4.19 ಗಂಟೆಯ ಪ್ರಮೋಷನ್​ ವಿಡಿಯೋ ಸಿದ್ಧಪಡಿಸಿತ್ತು. ಹಿಮವದ್​ ಗೋಪಾಲಸ್ವಾಮಿ ಬೆಟ್ಟ, ಗುಂಡಾಲ್​ ಜಲಾಶಯ, ಚಾಮರಾಜೇಶ್ವರ ದೇವಸ್ಥಾನ, ಮಲೆ ಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ, ವಿಜಯ ನಾರಾಯಣ ದೇಗುಲ, ಬಳೆ ಮಂಟಪ, ಗೊರವರ ಕುಣಿತ, ಸೋಲಿಗರ ಹಾಡಿಗಳು ಮತ್ತು ಅಲ್ಲಿನ ಜನಜೀವನ, ಜೋಡಿಗೆರೆ, ಹೊನ್ನಮೇಟಿಯ ವಿಹಂಗಮ ನೋಟವನ್ನು ಚಿತ್ರೀಕರಿಸಲಾಗಿತ್ತು. ಅಂತಿಮ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಪುನೀತ್​, ಸಂದೇಶ ಈ ನೀಡಿದ್ದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2020ರ ನ. 13ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುಯಲ್​ ಆಗಿ ಭಾಗವಹಿಸಿದ್ದ ಪುನೀತ್​ ರಾಜ್​ಕುಮಾರ್​ ವಿಡಿಯೋ ಬಿಡುಗಡೆ ಮಾಡಿದ್ದರು. ಬಳಿಕ ಮಾತನಾಡಿದ್ದ ಅವರು, ಜಿಲ್ಲೆಯ ರಾಯಭಾರಿಯಾಗಿ ಪ್ರವಾಸೋದ್ಯಮ ಮಾತ್ರವಲ್ಲ, ಅಭಿವೃದ್ಧಿ ಕಾರ್ಯಕ್ಕೂ ಕೈಜೋಡಿಸುತ್ತೇನೆ. ನನ್ನ ತಂದೆ ಹುಟ್ಟಿದ ಊರು ಎಂಬ ಹೆಮ್ಮೆಯಿಂದ ರಾಯಭಾರಿಯಾಗಲು ಒಪ್ಪಿಕೊಂಡಿದ್ದೇನೆ. ನಮ್ಮ ರಾಜ್ಯ, ನಮ್ಮ ದೇಶ ಚೆನ್ನಾಗಿ ಬೆಳೆಯಬೇಕು. ಜಿಲ್ಲೆಗಾಗಿ ವಿಡಿಯೋ ಮಾತ್ರವಲ್ಲ, ಬೇರೆ ಕೆಲಸಗಳನ್ನೂ ಮಾಡಿಕೊಡಲು ಸಿದ್ಧವಿದ್ದೇನೆ ಎಂದು ಭರವಸೆ ನೀಡಿದ್ದರು.

ಬೆಂಗಳೂರಿನ ಪುನೀತ್​ ನಿವಾಸಕ್ಕೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಸುರೇಶ್​ಕುಮಾರ್​ ಮತ್ತು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಭೇಟಿ ನೀಡಿ "ಚೆಲುವ ಚಾಮರಾಜನಗರ'' ಅಭಿಯಾನದ ರಾಯಭಾರಿ ಆಗುವಂತೆ ಮನವಿ ಮಾಡಿದ್ದರು (ಸಂಗ್ರಹ ಚಿತ್ರ).

ತವರಿಗೆ ಬರಲಿಲ್ಲ ರಾಯಭಾರಿ
ಪುನೀತ್​ ರಾಜ್​ಕುಮಾರ್​ ಕೆಲ ದಿನಗಳ ಹಿಂದೆ ಗಾಜನೂರಿಗೆ ಬಂದಿದ್ದರು. ಆದರೆ ರಾಯಭಾರಿಯಾಗಿ ಆಗಮಿಸಲು ಸಾಧ್ಯವಾಗಲೇ ಇಲ್ಲ. ಜಿಲ್ಲಾಡಳಿತ ರೂಪಿಸಿರುವ "ಚೆಲುವ ಚಾಮರಾಜನಗರ'' ಯೋಜನೆ ಕಾರ್ಯರೂಪಕ್ಕೆ ಬರಲು ಕೋವಿಡ್​ನಿಂದಾಗಿ ಸಾಧ್ಯವಾಗಲಿಲ್ಲ. ರಾಯಭಾರಿಯಾಗಲು ಒಪ್ಪಿದ್ದ ಪುನೀತ್​, ಜಿಲ್ಲೆಯ ಪ್ರವಾಸಿ ತಾಣಗಳ ವಿಡಿಯೋದಲ್ಲಿ ಸಂದೇಶ ನೀಡಿದ್ದು ಬಿಟ್ಟರೆ ಬೇರೆ ಕಾರ್ಯದಲ್ಲಿ ಭಾಗವಹಿಸಲು ವಿಧಿ ಬಿಡಲಿಲ್ಲ.

ಪುನೀತ್​ ನಿಲ್ಲಿಸಿ ಹೋದ ಕೆಲಸವನ್ನು ಶಿವರಾಜ್​ಕುಮಾರ್​ ಮುಂದುವರಿಸಿ ಅವರ ಕನಸುಗಳನ್ನು ಸಾಕಾರಗೊಳಿಸಬೇಕೆಂದು ಪುನೀತ್​ ಮತ್ತು ಶಿವಣ್ಣ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಜಿಲ್ಲೆಯೊಂದಿಗೆ ಉತ್ತಮ ನಂಟು ಹೊಂದಿರುವ ಶಿವರಾಜ್​ಕುಮಾರ್​ ಅವರೇ "ಚೆಲುವ ಚಾಮರಾಜನಗರ'' ರಾಯಭಾರಿ ಆಗಬೇಕೆಂದಿದ್ದಾರೆ. ಸದ್ಯದಲ್ಲೇ ಜಿಲ್ಲೆಗೆ ಶಿವರಾಜ್​ಕುಮಾರ್​ ಭೇಟಿ ನೀಡುವ ಸಾಧ್ಯತೆ ಇದ್ದು, ಆ ವೇಳೆ ಅಭಿಮಾನಿಗಳು ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.

"ಚೆಲುವ ಚಾಮರಾಜನಗರ'' ರಾಯಭಾರಿ ಪುನೀತ್​ ರಾಜ್​ಕುಮಾರ್​ ಅವರನ್ನು ನಾವಿಂದು ಕಳೆದುಕೊಂಡಿದ್ದೇವೆ. ಅವರ ಆಶಯಗಳನ್ನು ಈಡೇರಿಸಬೇಕೆಂದು ಕೋರಿ ಅಭಿಮಾನಿಗಳು ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡುತ್ತೇವೆ. "ಚೆಲುವ ಚಾಮರಾಜನಗರ'' ರಾಯಭಾರಿ ಆಗಬೇಕೆಂದು ಕೋರುತ್ತೇವೆ. ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸುತ್ತೇವೆ.
| ಮಂಜು ಅಧ್ಯ ಶಿವಸೇನೆ ಟೀಂ, ಚಾಮರಾಜನಗರ