ನ್ಯೂಸ್

ಅಪ್ಪಾಜಿಯ ಪ್ರತಿಮೆ ಉದ್ಘಾಟನೆಗೆ ಅಂದು ಅಪ್ಪು ಹೋಗಿದ್ದ, ಆದ್ರೆ ಇವತ್ತು... ಎನ್ನುತ್ತಲೇ ಭಾವುಕರಾದ ರಾಘಣ್ಣ

arunakunigal

ಬೆಂಗಳೂರು: ಬನಶಂಕರಿಯಲ್ಲಿ ಸ್ತಪತಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಕಂಚಿನ ಪ್ರತಿಮೆ ತಯಾರಿಕೆ ಕೆಲಸ ಶೇ.90 ಕೆಲಸ ಮುಗಿದಿದೆ.

ನಟ ರಾಘವೇಂದ್ರ ರಾಜ್​ಕುಮಾರ್, ಮಾಜಿ ಮೇಯರ್ ಜೆ.ಹುಚ್ಚಪ್ಪ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಮತ್ತಿತರರು ಮಂಗಳವಾರ ಪ್ರತಿಮೆ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್,  ಅಂದು ಬಿಬಿಎಂಪಿ ಆವರಣದಲ್ಲಿ ಅಪ್ಪಾಜಿಯ ಪ್ರತಿಮೆ ಅನಾವರಣಕ್ಕೆ ಅಪ್ಪು ಹೋಗಿದ್ದ, ಆದ್ರೆ ಈಗ ಅಪ್ಪು ಪ್ರತಿಮೆಯೂ ಅಪ್ಪಾಜಿ ಪಕ್ಕ ಸ್ಥಾಪನೆ ಆಗ್ತಿದೆ.. ಎನ್ನುತ್ತಲೇ ಭಾವುಕರಾದರು.

ಪುನೀತ್ ರಾಜ್​ಕುಮಾರ್ ನಮ್ಮ ಕುಟುಂಬಕ್ಕಿಂತ ಹೆಚ್ಚು ಪ್ರೀತಿಯನ್ನು ಅಭಿಮಾನಿಗಳಿಂದ ಸಂಪಾದನೆ ಮಾಡಿದ್ದಾರೆ. ಅಪ್ಪು ನಮ್ಮಿಂದ ದೂರವಾಗಿ 20 ದಿನ ಕಳೆದರೂ ಜನರ ನೋವು ಮಾತ್ರ ಕಡಿಮೆ ಆಗಿಲ್ಲ. ಅಪ್ಪು ಮಾಡಿದ ಸಮಾಜ ಸೇವಾ ಕಾರ್ಯಗಳನ್ನು ನಾವು ಮುನ್ನೆಡಿಸಿಕೊಂಡು ಹೋಗುತ್ತೇವೆ. ಪುನೀತ್ ರಾಜ್​ಕುಮಾರ್ ಎಲ್ಲೂ ಹೋಗಿಲ್ಲ. ಅವರು ನಮ್ಮ ಜತೆಯಲ್ಲೇ ಇದ್ದಾರೆ. ಅಪ್ಪು ಪ್ರತಿಮೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಂತಿಮ ರೂಪ ನೀಡದಾಗ ಎದುರಲ್ಲಿ ನಮ್ಮ ಜೊತೆ ಅಪ್ಪುನೇ ನಿಂತಂತೆ ಭಾಸವಾಗುತ್ತದೆ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದರು.