ನ್ಯೂಸ್

ಪುನೀತ್​ ಅಗಲಿಕೆ ನೋವು: ಹಾಸನದಲ್ಲಿ ಡಾ.ರಾಜ್​ ಸಂಘದ ಮಾಜಿ ಅಧ್ಯಕ್ಷರ ಪುತ್ರನೊಬ್ಬ ಆತ್ಮಹತ್ಯೆ

ಹಾಸನ: ಡಾ.ರಾಜ್​ಕುಮಾರ್​ ಸಂಘದ ಹಾಸನ ಅಧ್ಯಕ್ಷರಾಗಿದ್ದ ದಿ.ಹಾ.ರಾ.ನಾಗರಾಜ್​ ಅವರ ಕಿರಿಯ ಪುತ್ರ ಮಯೂರ ನಾಗರಾಜ್​ (34) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟ ಪುನೀತ್​ ರಾಜ್​ಕುಮಾರ್ ಅವರ ಅಗಲಿಕೆ ನೋವನ್ನು ತಾಳಲಾರದೆ ಖಿನ್ನತೆಗೆ ಒಳಗಾಗಿ ಮಯೂರ ಸಾವಿನ ಮನೆಯ ಕದತಟ್ಟಿದ್ದಾರೆ ಎನ್ನಲಾಗಿದೆ. ಪುನೀತ್​ ನಿಧನರಾಗಿ 25 ದಿನ ಕಳೆದರೂ ಅಭಿಮಾನಗಳ ದುಃಖ, ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಇಂತಹ ವಿಷಾದನೀಯ ಸ್ಥಿತಿಯಲ್ಲಿ ಅಭಿಮಾನಿಗಳು ಧೈರ್ಯಗೆಡಬಾರದು, ತಾಳ್ಮೆ ತಂದುಕೊಳ್ಳಬೇಕು. ಪುನೀತ್​ ಅವರು ಎಂದೂ ಇಂತಹದ್ದನ್ನು ಸಹಿಸಲ್ಲ ಎಂದು ಸ್ವತಃ ಶಿವರಾಜ್​ಕುಮಾರ್ ಮತ್ತು ರಾಘವೇಂದ್ರ ರಾಜ್​ಕುಮಾರ್​ ಪದೇಪದೆ ಮನವಿ ಮಾಡುತ್ತಿದ್ದರೂ ಅಭಿಮಾನಿಗಳ ಆತ್ಮಹತ್ಯೆ ಪ್ರಕರಣ ಮುಂದುವರಿದಿದೆ.

ಪುನೀತ್​ ಪುನೀತ್​ ಅಗಲಿದ ದಿನದಿಂದಲೂ ಮಯೂರ ನಾಗರಾಜ್​ ಖಿನ್ನತೆಗೆ ಜಾರಿದ್ದರು. ಸರಿಯಾಗಿ ತಿಂಡಿ-ಊಟ ಸಹ ಮಾಡುತ್ತಿರಲಿಲ್ಲ. ಪದೇ ಪದೆ ಅಪ್ಪು ಸಾವಿನ ಬಗ್ಗೆ ನೋವು ವ್ಯಕ್ತಪಡಿಸುತ್ತಲೇ ಇದ್ದರಂತೆ. ಬುಧವಾರ ರಾಜ್​ಕುಮಾರ್​ ನಗರದ ತನ್ನ ಮನೆಯಲ್ಲಿ ತಾಯಿ ಹಾಗೂ ಪತ್ನಿ ಇದ್ದ ವೇಳೆಯೇ ಕೊಠಡಿಗೆ ಹೋಗಿ ಮಯೂರ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಕುಟುಂಬಸ್ಥರು ನೆರೆಯವರ ಸಹಕಾರ ಪಡೆದು ಮಯೂರ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು. ಪೆನ್ಷನ್​ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.