ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹರಿಪರಿಗಂ ಗ್ರಾಮದಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಮತ್ತು ಇವರ ಪತ್ನಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಅವರ ಮಗಳಿಗೂ ಗುಂಡೇಟು ಬಿದ್ದಿದ್ದು, ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಪೊಲೀಸ್ ಅಧಿಕಾರಿ ಫಯಾಜ್ ಅಹ್ಮದ್ ಅವರ ನಿವಾಸದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಫಯಾಜ್ ಮತ್ತು ಅವರ ಪತ್ನಿ ರಾಜಾ ಬೇಗಂ ಮೃತಪಟ್ಟಿದ್ದಾರೆ.
ಜಮ್ಮುವಿನ ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯು ಪಡೆ ಕೇಂದ್ರವೊಂದರ ಮೇಲೆ ಭಾನುವಾರ ಡ್ರೋನ್ ಮೂಲಕ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ ಭಯೋತ್ಪಾದಕರು ಪುಲ್ವಾಮಾದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ್ದಾರೆ.