ನ್ಯೂಸ್

ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕ ಕೊನೆಗೂ ಸಿಕ್ಕಿಬಿದ್ದ! ಈತನ ವಿರುದ್ಧ 11 ಪ್ರಕರಣ ದಾಖಲು

ಎನ್​.ಆರ್​.ಪುರ: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಡಿ ತಲೆಮರೆಸಿಕೊಂಡಿದ್ದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿ ವಿರುದ್ಧ ದಾಖಲಾದ ಕೇಸ್​ ಒಂದಲ್ಲ, ಎರಡಲ್ಲ ಬರೋಬ್ಬರಿ 11 ಪ್ರಕರಣ!

ಶಿಕ್ಷಕ ಪ್ರಭು ನಾಯ್ಕ ಬಂಧಿತ. ಈತನ ವಿರುದ್ಧ ಬಿಇಒ ದೂರು ನೀಡಿದ್ದರು. ಜ.16ರ ಬೆಳಗ್ಗೆಯಿಂದಲೇ ಶಾಲೆಗೆ ಎಎಸ್ಪಿ ಶ್ರುತಿ ನೇತೃತ್ವದ ತಂಡ ಭೇಟಿ ನೀಡಿ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು. ಸಂಜೆ ವೇಳೆಗೆ ಶಾಲೆಗೆ ಎಸ್​ಪಿ ಎಂ.ಎಚ್​. ಅಕ್ಷಯ್​ ಭೇಟಿ ನೀಡಿ ತನಿಖಾ ವರದಿ ಪರಿಶೀಲಿಸಿದ್ದರು. ನಂತರ ಶಿಕ್ಷಕನ ವಿರುದ್ಧ 11 ಎಫ್​ಐಆರ್​ಗಳು ದಾಖಲಾಗಿದ್ದವು. ಶಿಕ್ಷಕನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಐದಾರು ದಿನಗಳಿಂದ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಶಿಕ್ಷಕನನ್ನು ತರೀಕೆರೆಯಲ್ಲಿ ಬಂಧಿಸಿದರು.

ಶಿಕ್ಷಕನ ದೂರವಾಣಿ ಹಾಗೂ ಆತ ಎನ್​.ಆರ್​.ಪುರದಿಂದ ತೆರಳಿದ್ದ ಬಗ್ಗೆ ಪಟ್ಟಣದ ಹಲವು ಸಿಸಿ ಕ್ಯಾಮರಾಗಳಲ್ಲಿ ಪರಿಶೀಲಿಸಿದಾಗ ಆರೋಪಿಯು ವಾಹನದಲ್ಲಿ ಬೇರೊಬ್ಬರಿಂದ ಡ್ರಾಪ್​ ತೆಗೆದುಕೊಂಡಿರುವ ಮಾಹಿತಿ ಲಭ್ಯವಾಯಿತು. ಇದನ್ನು ಆಧರಿಸಿ ಹೊರಟ ಪೊಲೀಸರು ತರೀಕೆರೆಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.