ಹೈದರಾಬಾದ್: ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರುದ್ಧ ಸೇನಾ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ತೆಲಂಗಾಣದ ಹೈದರಾಬಾದ್ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಸಿಕಂದರಾಬಾದ್ನಲ್ಲಿ ಪರಿಸ್ಥಿತಿ ಕೈಮೀರಿದ್ದು, ಪ್ರಯಾಣಿಕರಿದ್ದ ರೈಲು ಬೋಗಿಗೆ ಉದ್ರಿಕ್ತ ಗುಂಪು ಪೆಟ್ರೋಲ್ ಬಾಂಬ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಗಾಳಿಯಲ್ಲಿ ಗುಂಡು, ಲಾಠಿ ಚಾರ್ಜ್ ಅಸ್ತ್ರ ಪ್ರಯೋಗಿಸದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ.
ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಕಂಡ ಕಂಡ ರೈಲಿನ ಬೋಗಿಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿದೆ. ಈ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದು, ನೂಕುನುಗ್ಗಲಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತನನ್ನು ದಾಮೋದರಕುರಷಿಯಾ ಎಂದು ಗುರುತಿಸಲಾಗಿದೆ. 8 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರೈಲು ಸಂಚಾರ ರದ್ದಾಗಿದೆ.