ನ್ಯೂಸ್

ಕಾರ್ಯಕರ್ತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಿಎಂ

ಬೆಂಗಳೂರು: ಪಕ್ಷ ಹಾಗೂ ಸರ್ಕಾರದ ನಡುವಿನ ಕಂದಕ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರಿಂದ ಅಹವಾಲು ಆಲಿಸಿದರು.

ವಿಕಲಚೇತನರ ಬಳಿಗೇ ತೆರಳಿ ಸಮಸ್ಯೆಗೆ ಕಿವಿಗೊಟ್ಟ ಸಿಎಂಗೆ ತ್ರಿಚಕ್ರ ವಾಹನಕ್ಕೆ ಬೇಡಿಕೆ, ಸರ್ಕಾರಿ ಉದ್ಯೋಗಕ್ಕೆ ಕೋರಿಕೆ, ನಿಗಮ ಮಂಡಳಿಯಲ್ಲಿ ಅವಕಾಶ, ಸ್ವಂತ ಉದ್ಯೋಗಕ್ಕೆ ಅನುದಾನ ನೆರವು ಯಾಚನೆ, ಸಾಲದ ಸವಲತ್ತು ಸೇರಿ ನಾನಾ ಬೇಡಿಕೆಗಳು ಸಲ್ಲಿಕೆಯಾದವು.

ಪ್ರತಿಯೊಬ್ಬ ಕಾರ್ಯಕರ್ತರ ಅಹವಾಲು ಮತ್ತು ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡಿರುವ ಬಗ್ಗೆ ವಿವರವಾಗಿ ಕೇಳಿ ತಿಳಿದ ಸಿಎಂ, ಅಹವಾಲುಗಳನ್ನು ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬೇಡಿಕೆ ಈಡೇರಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ವಿಕಲಚೇತನರು ಹೆಚ್ಚಿದ್ದು, ನಮ್ಮ ಯಜಮಾನರಿಗೆ ಸ್ಟ್ರೋಕ್ ಆಗಿದೆ, ಬದುಕಲು ದಾರಿ ಮಾಡಿಕೊಡಿ, ಅಂಗಡಿ ಹಾಕಿಕೊಳ್ಳಲು ಆರ್ಥಿಕ ಸಹಾಯ ಮಾಡಿ, ಬೀದಿ ಬದಿ ವೆಂಡಿಂಗ್ ಅಂಗಡಿ ಆರಂಭಿಸಲು ಸಹಾಯ ಮಾಡಿ ಎಂದು ಮನವಿ ಮಾಡಿದರು.

ಕೆಎಂಎ್ನಲ್ಲಿರುವ ಸ್‌ಟಾವೇರ್ ಹಾಲು ಉತ್ಪಾದಕರಿಗೆ ಅನುಕೂಲಕರ ಆಗಿಲ್ಲ, ಕನ್ನಡದಲ್ಲಿ ಮಾಹಿತಿ ಇಲ್ಲ ಎಂದು ಮೈಸೂರಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳದ ಎಸ್.ಶಿವನಾಗಪ್ಪ ಸಿಎಂ ಗಮನಕ್ಕೆ ತಂದರು.

ಮುಖ್ಯಮಂತ್ರಿಗಳು ಸ್ಥಳದಲ್ಲೇ ಕೆಎಂಎ್ ಎಂಡಿಯವರನ್ನು ಸಂಪರ್ಕಿಸಿ, ಹಾಲು ಉತ್ಪಾದಕರ ಸ್ನೇಹಿಯಾಗಿರುವ ಸಾಫ್ಟ್ೃವೇರ್ ಅಳವಡಿಸುವಂತೆ ಸೂಚನೆ ನೀಡಿದರು.

ಮನೆ ಭಾಗ್ಯ

ನಾವು ಕಾಂಗ್ರೆಸ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ, ನಮಗೆ ಮನೆ ಕೊಡಿ ಎಂದು ಜಯಂತಿ, ಅರ್ಚನಾ, ಸುಗಂಧಿ, ಆಶಾ, ಸಂಧ್ಯಾ ಮನವಿ ಸಲ್ಲಿಸಿದಾಗ, ನಿಮಗೆ ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಮನೆ ನೀಡುವಂತೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ನಾನು ಪಕ್ಷಕ್ಕೆ ದುಡಿಯುತ್ತಿದ್ದು, ಒಂದು ಮನೆ ಮಂಜೂರು ಮಾಡಿಕೊಡಿ ಎಂದು ಯಾದಗಿರಿ ಜಿಲ್ಲೆಯ ರಾಮಸಮುದ್ರದ ಚಾಂದಪಾಷ ಮನವಿಗೆ ಸ್ಪಂದಿಸಿದ ಸಿಎಂ, ನಿಮ್ಮ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಹೇಳುವೆ ಹಾಗೂ ಸಿಎಂ ಪರಿಹಾರ ನಿಧಿ ಮೂಲಕ ನೀಡುತ್ತೇನೆ ಎಂದರು.

ಚಿಕ್ಕಬಳ್ಳಾಪುರದ ಕಾರ್ಯಕರ್ತನೊಬ್ಬ, ನಾನು ಪ್ರದೀಪ್ ಈಶ್ವರ್ ಪರ ಕೆಲಸ ಮಾಡಿದ್ದೇನೆ, ನೀವು ಚುನಾವಣಾ ಪ್ರಚಾರಕ್ಕೆ ಬಂದಾಗಲೂ ಕೆಲಸ ಮಾಡಿದ್ದೆ. ಏನಾದರೂ ಸಹಾಯ ಮಾಡಿ ಎಂದು ಕೋರಿದನು. ಆಗ ಪಕ್ಷದಿಂದ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆಂದ ಭರವಸೆ ನೀಡಿದರು.

ನೆಲಮಂಗಲದ ಮಾರುತಿ ಎಂಬುವರು ಮನವಿ ಸಲ್ಲಿಸಿ, ನನಗೆ ಗುತ್ತಿಗೆ ನೌಕರಿ ಕೊಡಿಸುವಂತೆ ಬೇಡಿಕೆ ಇಟ್ಟರು. ಕೆಲಸ ಕೊಡಿಸುವುದಾಗಿ ಸಿಎಂ ಭರವಸೆ ನೀಡಿದರು.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ವಿಚಾರಿಸಿದ ಸಿಎಂ, ನಿನಗೆ ಮಕ್ಕಳಿದ್ದಾರಾ? ಏನು ಓದುತ್ತಿದ್ದಾರೆ? ನಿಮ್ಮ ಹೆಂಡತಿಗೆ ಗೃಹಲಕ್ಷ್ಮಿ ಬರುತ್ತಿದೆಯೇ? ಎಂದು ಪ್ರಶ್ನಿಸಿದರು. ನಾವು ಕೂಲಿ ಕೆಲಸ ಮಾಡುತ್ತಿದ್ದೇವೆ, ಜೀವನ ಕಷ್ಟವಾಗಿದೆ. ಏನಾದರೂ ಕೆಲಸ ಕೊಡಿಸಿ ಎಂದು ಕಣ್ಣು ಕಾಣದ ಕಾರ್ಯಕರ್ತರೊಬ್ಬರು ಮನಿ ಮಾಡಿದರು. ಅರ್ಜಿ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದರು.

ದೃಷ್ಟಿ ದೋಷ ಸಮಸ್ಯೆ ಹೊಂದಿರುವ ಆಶಾ ಪವಾರ್ ಎಂಬುವರು, ನಾನು ಎಂಎ ಪೊಲಿಟಿಕಲ್ ಸೈನ್ಸ್ ಓದಿದ್ದೇನೆ. ಉದ್ಯೋಗ ಕೊಡಿಸಿ ಎಂದು ಕೋರಿದರು. ನೀನು ಪಾಠ ಮಾಡುತ್ತೀಯೇನಮ್ಮಾ, ಎಂದು ಸಿಎಂ ಪ್ರಶ್ನೆ ಹಾಕಿದಾಗ ಆಕೆ ಹೌದೆಂದರು. ಆಗಾ, ನೀವು ಮರಾಠನಾ ಎಂದು ಕೇಳಿದ ಸಿಎಂ ಮುಂದೆ ಸಾಗಿದರು. ಬಳಿಕ ಸಿಎಂ ವಿಶೇಷಾಧಿಕಾರಿ ಆಕೆಯಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್, ತನ್ವೀರ್ ಸೇಠ್ ಹಾಗೂ ವಸಂತ್ ಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ ಉಪಸ್ಥಿತರಿದ್ದರು.