ಲಕ್ನೊ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ಉತ್ತರ ಭಾರತದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿ ರೂಪುಗೊಂಡಿತ್ತು. ಉತ್ತರಪ್ರದೇಶದ ಪ್ರಯಾಗರಾಜ್ ನಗರದಲ್ಲೂ ಪ್ರತಿಭಟನಾಕಾರರು ಪೊಲೀಸರನ್ನು ಗುರಿಯಾಗಿಸಿಕೊಂಡು ಕಲ್ಲುತೂರಟ ನಡೆಸಿದ್ದರು. ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆಯ ಹಾದಿ ಏಕಾಏಕಿ ಗಲಭೆಯಾಗಿ ರೂಪುಗೊಂಡಿದ್ದರ ಹಿಂದೆ ಕಾಣದ ಕೈಗಳಿವೆ ಎಂದು ಶಂಕಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಓರ್ವ ಮಾಸ್ಟರ್ ಮೈಂಡ್ ಜಾವೇದ್ ಅಹ್ಮದ್ ಎಂಬಾತನ್ನು ಬಂಧಿಸಿದ್ದಾರೆ.
ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಜಾವೇದ್ರ ಮಗಳು ಕೂಡ ಗಲಭೆಗೆ ಕುಮ್ಮಕ್ಕು ನೀಡಿರುವ ಶಂಕೆ ವ್ಯಕ್ತವಾಗಿದೆ. ತನಿಖೆಗಾಗಿ ನಮ್ಮ ತಂಡವನ್ನು ರಾಷ್ಟ್ರ ರಾಜಧಾನಿಗೆ ಕಳುಹಿಸಲಾಗುವುದು. ಇನ್ನಷ್ಟು ಮಾಸ್ಟರ್ ಮೈಂಡ್ ಗಳು ಇರಬಹುದು. ಕಲ್ಲು ತೂರಾಟಕ್ಕೆ ಅಪ್ರಾಪ್ತ ಮಕ್ಕಳನ್ನೂ ಬಳಸಿಕೊಂಡಿದ್ದಾರೆ. ಪಿಎಫ್‌ಐ ಕೈವಾಡ ಇದೆಯೇ ಇಲ್ಲವೇ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ. ಮಾಧ್ಯಮ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಹಲವು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ಕಾನ್ಪುರದಲ್ಲೂ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಸಾರ್ವಜನಿಕ ಆಸ್ತಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಇದಕ್ಕೆ ಕಾರಣವಾಗಿರುವವರ ವಿರುದ್ಧ ಸಮರ ಸಾರಿರುವ ಸಿಎಂ ಯೋಗಿ, ಅವರ ನಿವಾಸಗಳ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದ್ದಾರೆ. ಹಿಂಸಾಚಾರಕ್ಕೆ ಮುಖ್ಯ ಕಾರಣವಾದ ಇಶ್ತಿಯಾಕ್ ಎಂಬಾತನ ನಿವಾಸದ ಮೇಲೆ ಬುಲ್ಡೋಜರ್ನಿಂದ ದಾಳಿ ಮಾಡಲಾಗಿದೆ.