ಚೀನಾ: ನಗರ ಮತ್ತು ಪಟ್ಟಣಗಳಲ್ಲಿ ಜೀವನ ಪರಿವರ್ತಿಸುವ ಭರವಸೆ ನೀಡುವ ಜಿಮ್ ಫಿಟ್‌ನೆಸ್ ಸವಾಲುಗಳಿಗೆ ಕೊರತೆ ಇಲ್ಲ. ಆದರೆ, ಚೀನಾದಲ್ಲಿನ ಒಂದು ಜಿಮ್ ಕೊಟ್ಟಿರುವ ಬಂಫರ್ ಆಫರ್ ಇಂಟರ್ನೆಟ್ ಅನ್ನು ಶೇಕ್ ಮಾಡಿದೆ. ಹೌದು, ಉತ್ತರ ಚೀನಾದ ಒಂದು ಫಿಟ್‌ನೆಸ್ ಕೇಂದ್ರವು ತೂಕ ಇಳಿಸುವ ಸವಾಲನ್ನು ಪರಿಚಯಿಸಿದೆ. ಈ ಸವಾಲಿನಲ್ಲಿ ಗೆದ್ದವರಿಗೆ ಅದು ಬಹುಮಾನವಾಗಿ ಐಷಾರಾಮಿ ಕಾರನ್ನು ಭರವಸೆ ನೀಡಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಶಾಂಡೊಂಗ್ ಪ್ರಾಂತ್ಯದ ಬಿನ್‌ಝೌನಲ್ಲಿರುವ ಜಿಮ್ ಕೇಂದ್ರವೊಂದು ''3 ತಿಂಗಳಲ್ಲಿ 50 ಕೆ.ಜಿ ತೂಕ ಇಳಿಸಿಕೊಂಡವರಿಗೆ ಪೋರ್ಷೆ ಐಷಾರಾಮಿ ಕಾರು ನೀಡುವುದಾಗಿ ಅಕ್ಟೋಬರ್ 23 ರಂದು ಘೋಷಿಸಿದೆ. ಇನ್ನು ಈ ವಿಷಯವೂ ತಕ್ಷಣವೇ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ಪಾಲಕ್ ತಿನ್ನಲು ಇಷ್ಟವಿಲ್ಲವೇ? ಹೀಗೆ ಮಾಡಿ, ಇದು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ! Face pack
ಜಿಮ್ ಪ್ರಚಾರದ ಪೋಸ್ಟ್ನಲ್ಲಿ ವಿಜೇತರಿಗೆ ಸುಮಾರು 1.1 ಮಿಲಿಯನ್ ಯುವಾನ್(1.36 ಕೋಟಿ ರೂ) ಮೌಲ್ಯದ ಐಷಾರಾಮಿ ಪೋರ್ಷೆ ಕಾರು ನೀಡಲಾಗುವುದು ಎಂದು ಹೇಳಿದೆ. ಅಲ್ಲದೆ, ವಾಂಗ್ ಎಂಬ ಫಿಟ್‌ನೆಸ್ ತರಬೇತುದಾರ ಸ್ಥಳೀಯ ಮಾಧ್ಯಮ ಕ್ಸಿಯಾಂಗ್ ಯಾಂಗ್ ವಿಡಿಯೋಗೆ ಈ ಸವಾಲು ನಿಜವಾದದ್ದು ಎಂದು ದೃಢಪಡಿಸಿದ್ದಾರೆ.
ಈ ಸವಾಲು ನಿಜ. ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದೆ. ನಾವು 30 ಜನರ ಭಾಗವಹಿಸುವಿಕೆ ಮಾತ್ರ ಅವಕಾಶ ನೀಡಲಾಗಿದೆ. ಇದುವರೆಗೂ 8 ರಿಂದ 10 ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಾಂಗ್ ಹೇಳಿದ್ದಾರೆ. ಅಲ್ಲದೆ, ಸವಾಲು ಎದುರಿಸುವವರಿಗೆ ನೀಡಲಾಗುತ್ತಿರುವ ಪೋರ್ಷೆ ಕಾರು ಹೊಸದಲ್ಲ. "ಈ ಕಾರು ಜಿಮ್ ಮಾಲೀಕರಿಗೆ ಸೇರಿದ್ದು, ಅವರು ಹಲವಾರು ವರ್ಷಗಳಿಂದ ಓಡಿಸುತ್ತಿರುವ 2020ರ ಬಳಸಿದ ಮಾದರಿಯಾಗಿದೆ" ಎಂದು ವಾಂಗ್ ಸ್ಪಷ್ಟಪಡಿಸಿದ್ದಾರೆ.
ಈ ಅಸಾಮಾನ್ಯ ಸವಾಲು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಅಲೆಯನ್ನು ಹುಟ್ಟುಹಾಕಿದ್ದು, ಅನೇಕ ಬಳಕೆದಾರರು ಅಪನಂಬಿಕೆ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. "ನಾನು 50 ಕೆಜಿ ತೂಕ ಇಳಿಸಿಕೊಂಡರೆ, ನನ್ನ ಬಳಿ ಕೇವಲ 5 ಕೆಜಿ ಮಾತ್ರ ಉಳಿಯುತ್ತದೆ. ನಾನು ಇನ್ನೂ ಜೀವಂತವಾಗಿರುತ್ತೇನೆಯೇ?" ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಈ ಸವಾಲು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೂ, ಇದು ಎಷ್ಟು ಅಸುರಕ್ಷಿತ ಎಂಬುದರ ಬಗ್ಗೆ ವೈದ್ಯಕೀಯ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳಲ್ಲಿ 50ಕೆಜಿ ತೂಕ ಇಳಿಸಿಕೊಳ್ಳುವುದು ಎಂದರೆ ಪ್ರತಿದಿನ ಅರ್ಧ ಕೆಜಿ ತೂಕ ಇಳಿಸಿಕೊಳ್ಳುವುದು ಎಂದರ್ಥ, ಆರೋಗ್ಯ ವೃತ್ತಿಪರರು ಹೇಳುವ ಪ್ರಕಾರ ಇದು ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.(ಏಜೆನ್ಸೀಸ್)