ನ್ಯೂಸ್

ಇಬ್ಬರ ಪ್ರಾಣ ತೆಗೆದ ವಿಷದ ತಂಬಿಗೆ! ಚಿಕ್ಕಮ್ಮ ವಿಷ ಕುಡಿದ ತಂಬಿಗೆಯಲ್ಲಿ ನೀರು ಕುಡಿದ ಪುಟ್ಟ ಕಂದನೂ ಬದುಕಲಿಲ್ಲ...

ನಾಯಕನಹಟ್ಟಿ(ಚಿತ್ರದುರ್ಗ): ಯುವತಿಯೊಬ್ಬಳು ತಂಬಿಗೆಯಲ್ಲಿ ವಿಷ ಹಾಕಿ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಮಗು ಕೂಡ ಅದೇ ತಂಬಿಗೆಯಲ್ಲಿ ನೀರು ಕುಡಿದು, ಮೃತಪಟ್ಟ ಹೃದಯವಿದ್ರಾವಕ ಘಟನೆ ಪಟ್ಟಣದ ಸಮೀಪದ ನರ್ಸರಿಯಲ್ಲಿ ಸಂಭವಿಸಿದೆ.

ಚಂದನ(18) ಮತ್ತು ಗಗನ್​(2) ಮೃತರು. ಗುಂತಕೋಲಮ್ಮನಹಳ್ಳಿಯ ರಾಜಣ್ಣ ತನ್ನ ಮಕ್ಕಳೊಂದಿಗೆ ಪಟ್ಟಣದ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದರು. ಚಂದನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಅನಾರೋಗ್ಯದಿಂದ ಬೇಸತ್ತು ಸೋಮವಾರ ವಿಷ ಸೇವಿಸಿದ್ದಳು. ಈ ಸುದ್ದಿ ತಿಳಿದು ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದರು. ತಂಬಿಗೆಯಲ್ಲಿ ವಿಷ ಇರುವುದನ್ನು ಅರಿಯದೇ ರಾಜಣ್ಣನ ಹಿರಿಯ ಮಗಳು ಪುಷ್ಪಾ, ತನ್ನ ಮಗು ಗಗನ್​ಗೆ ಅದರಿಂದಲೇ ನೀರು ಕುಡಿಸಿದ್ದಾರೆ. ಮಗು ನಿತ್ರಾಣಗೊಳ್ಳುತ್ತಿದ್ದಂತೆ ನಾಯಕನಹಟ್ಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಅತ್ತ ಯುವತಿ ಚಂದನ ಕೂಡ ಮೃತಪಟ್ಟಿದ್ದಾಳೆ.

ಅದೇ ತಂಬಿಗೆಯಲ್ಲಿ ಸಂಬಂಧಿಕರಾದ ಬೊಮ್ಮಣ್ಣ ಹಾಗೂ ತನುಜಾ ಎನ್ನುವವರು ನೀರು ಕುಡಿದು ಅಸ್ವಸ್ಥರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.