ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಖೆಡ್ಡಾ ತೋಡಲು ಕಾಂಗ್ರೆಸ್ ನ ಮಹಾನ್ ನಾಯಕರು ಯೋಜಿತ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅವರನ್ನು ಬಲಿ ಹಾಕಲೆಂದು ಮೂವರು ಉಪಮುಖ್ಯಮಂತ್ರಿಗಳ ನೇಮಕ ಪ್ರತಿಪಾದನೆಗೆ ಒತ್ತಾಸೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಶೇಷಾದ್ರಿಪುರಂನಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನದಲ್ಲಿ ಭಾನುವಾರ ಪಾಲ್ಗೊಂಡ ಅವರು, ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ನಾಯಕರಿಗೆ ದಿಕ್ಕು ತೋಚದಂತಾಗಿದೆ. ಪ್ರತಿಷ್ಠೆ ಉಳಿಸಿಕೊಳ್ಳುವುದಕ್ಕಾಗಿ ಆಂತರಿಕ ಷಡ್ಯಂತ್ರ ಹೂಡಲು ಮುಂದಾಗಿದ್ದಾರೆ ಎಂದು ತಿವಿದರು.
ಕಾಂಗ್ರೆಸದ ಓಲೈಕೆ, ತಾರತಮ್ಯ ಧೋರಣೆ ರಾಜಕಾರಣವನ್ನು ಬಿಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಆದರೆ ಅಲ್ಪಸಂಖ್ಯಾತರ ವಿರೋಧಿ ಖಂಡಿತ ಅಲ್ಲ. ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ಅಭ್ಯುದಯಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಶೋಷಣೆಗೆ ಕಾರಣವಾಗಿದ್ದ ತ್ರಿಬಲ್ ತಲಾಖ್ ನಿಷೇಧಿಸಿದ್ದಾರೆ. ಕಾಂಗ್ರೆಸ್ ನಂತೆ ಅಲ್ಪಸಂಖ್ಯಾತರನ್ನು ಸದಾ ಭಯದಲ್ಲಿಟ್ಟು, ಓಲೈಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.
ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಟ್ಟು ಗಲಭೆ ಎಬ್ಬಿಸಿದ ದೇಶ ದ್ರೋಹಿಗಳನ್ನು ಅಮಾಯಕರು ಎಂದು ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕೇಸ್ ವಾಪಸ್ ಪಡೆಯುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಅಪಾಯಕಾರಿಯಾಗಿದೆ. ಈ ನಡೆಯು ಅಕ್ಷಮ್ಯ ಅಪರಾಧವಾಗಲಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆಗಳನ್ನು ಮಾಧ್ಯಮಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಪಕ್ಷದಲ್ಲೇ ಅವರಿಗೆ ಮಹತ್ವವಿಲ್ಲ. ಹೀಗಾಗಿ ಏನೇನೋ ಬಡಬಡಿಸುತ್ತಿದ್ದಾರೆ. ನೀಡುತ್ತಿರುವ ಹೇಳಿಕೆಗಳ ಬಗ್ಗೆ ಸ್ವತಃ ಹರಿಪ್ರಸಾದ್ ಅವರಿಗೆ ಅರ್ಥವಾಗುತ್ತಿದೆಯೆ ? ಎಂಬುದು ಅನುಮಾನವೆಂದು ವಿಜಯೇಂದ್ರ ಚಾಟಿ ಬೀಸಿದರು.