ನ್ಯೂಸ್

ಮೇಕೆದಾಟು ಪಾದಯಾತ್ರೆ ತಡೆಯುವಂತೆ ಕೋರಿ ಹೈಕೋರ್ಟ್​ಗೆ ಸಲ್ಲಿಕೆಯಾಗಿದ್ದ ಪಿಐಎಲ್ ಇತ್ಯರ್ಥ

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಕೈಗೊಂಡಿದ್ದ ಪಾದಯಾತ್ರೆ ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಹೈಕೋರ್ಟ್​ಗೆ ಸಲ್ಲಿಕೆಯಾಗಿದ್ದ ಪಿಐಎಲ್ ಇತ್ಯರ್ಥವಾಗಿದೆ.

ಪಾದಯಾತ್ರೆ ನಿಷೇಧಿಸಿ ಆದೇಶ ಹೊರಡಿಸಿಲಾಗಿದ್ದು, ರಾಮನಗರ ಜಿಲ್ಲೆಯೂ ಸೇರಿ ಅಂತರಜಿಲ್ಲಾ ಪಾದಯಾತ್ರೆ ಅಥವಾ ಮೆರವಣಿಗೆಗಳಿಗೆ ಅವಕಾಶ ಕಲ್ಪಿಸದಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ. ಸದ್ಯದ ಕೋವಿಡ್ ಸನ್ನಿವೇಶವನ್ನು ಪರಿಗಣಿಸಿ, ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಲಾಗಿದೆ ಎಂದು ಕೆಪಿಸಿಸಿ ಪರ ವಕೀಲರೂ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಈ ಹೇಳಕೆಗಳನ್ನು ದಾಖಲಿಸಿಕೊಂಡು ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ರಾಜ್ಯದಲ್ಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ, ಮೆರವಣಿಗೆಗಳನ್ನು ನಿಷೇಧಿಸಿ ಜ.4ರಂದು ಹೊರಡಿಸಿರುವ ಎಸ್‌ಒಪಿ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

ಏನಿದು ಪ್ರಕರಣ: ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ (ಕೆಪಿಸಿಸಿ) ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ತಿಂಡ್ಲು ನಿವಾಸಿ ಎ.ವಿ. ನಾಗೇಂದ್ರ ಪ್ರಸಾದ್​ ಪಿಐಎಲ್​ ಸಲ್ಲಿಸಿದ್ದರು. ಈ ಅರ್ಜಿ ಕುರಿತು ಜ.12ರಂದು ವಿಚಾರಣೆ ನಡೆಸಿದ ಹೈಕೋರ್ಟ್​, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಕರೊನಾ ಹಿನ್ನೆಲೆ ರಾಜ್ಯದಲ್ಲಿ ಪ್ರತಿಭಟನೆ, ಧರಣಿ, ಮೆರವಣಿಗೆ ಸೇರಿ ಎಲ್ಲ ರೀತಿಯ ಸಾರ್ವಜನಿಕ ಚಟುವಟಿಕೆ ನಿರ್ಬಂಧಿಸಿ ನೀವೇ ಆದೇಶ ಹೊರಡಿಸಿದ್ದೀರಿ. ಪಾದಯಾತ್ರೆಗೆ ಅನುಮತಿ ನಿರಾಕರಿಸಿರುವ ರಾಮನಗರ ಜಿಲ್ಲಾಡಳಿತ, ಪಾದಯಾತ್ರೆ ನಡೆಸದಂತೆ ಸೂಚಿಸಿ ಕೆಪಿಸಿಸಿಗೆ ನೋಟಿಸ್ ನೀಡಿದೆ. ಹೀಗಿದ್ದರೂ ಪಾದಯಾತ್ರೆ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದೇಕೆ ಎಂದು ಪ್ರಶ್ನಿಸಿತ್ತು. ಇದಾದ ಮರದಿನವೇ ಅಂದರೆ ಜ.13ರಂದು ಕಾಂಗ್ರೆಸ್ ಪಾದಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಿದೆ.