ಬೆಂಗಳೂರು: ಸಾರ್ವಜನಿಕರು ಹೃದಯಾಘಾತಕ್ಕೀಡಾಗಿ ಸಾಯುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ನಿನ್ನೆ ಇಂಥ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂದು ಬೆಳ್ಳಂಬೆಳಗ್ಗೆ ಇನ್ನೊಬ್ಬರು ಕುಸಿದು ಬಿದ್ದು ಸಾವಿಗೀಡಾಗಿದ್ದು, ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ ಕ್ರೀಡಾ ಮೈದಾನದಲ್ಲಿ ಈ ಘಟನೆ ನಡೆದಿದೆ. ಜಾಗಿಂಗ್ಗೆ ಎಂದು ಬಂದಿದ್ದ ಈ ವ್ಯಕ್ತಿ ಆ ಸಂದರ್ಭದಲ್ಲೇ ಕುಸಿದು ಬಿದ್ದಿದ್ದು, ಸ್ಥಳೀಯರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಾವು ಸಂಭವಿಸಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಸಾವಿಗೀಡಾದ ವ್ಯಕ್ತಿ ಏರ್ಫೋರ್ಸ್ ಅಧಿಕಾರಿ ಗೋಪಾಲ್ ಸಿಂಗ್ ರಾವತ್ (35) ಎಂದು ಗುರುಸಲಾಗಿದೆ. ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ನಿನ್ನೆ 31 ಪ್ರಯಾಣಿಕರಿದ್ದ ರಾಜಹಂಸ ಬಸ್ ಚಲಾಯಿಸುತ್ತಿದ್ದ ಚಾಲಕ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದು, ಈ ಸಂದರ್ಭ ಬಸ್ ಆಯತಪ್ಪಿ ಪಲ್ಟಿಯಾಗಿತ್ತು. ಹಾಗೆಯೇ ಕಾಂತಾರ ಸಿನಿಮಾ ನೋಡಲು ಹೋಗಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಚಿತ್ರಮಂದಿರದಲ್ಲೇ ಮೃತಪಟ್ಟಿದ್ದರು.