ಹಾವೇರಿ: ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ನಲ್ಲಿ ಬೇಡ್ತಿ- ವರದಾ ನದಿ ಜೋಡಣೆ ಅನುಮೋದನೆಗೆ ಒತ್ತಾಯಿಸಿ ಹಾಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಿ ಜಿಲ್ಲೆಯ ಶಾಸಕರಿಗೆ ಒತ್ತಡ ಹಾಕುವ ನಿಟ್ಟಿನಲ್ಲಿ ಮಾ. 6ರಂದು ಜಿಲ್ಲೆಯ ಎಲ್ಲ ಶಾಸಕರ ಮನೆ ಎದುರು ಒಂದು ದಿನದ ಧರಣಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು ಸಮಗ್ರ ನೀರಾವರಿ ಸೌಲಭ್ಯ ಪಡೆದುಕೊಳ್ಳಲು ಬೇಡ್ತಿ-ವರದಾ ನದಿ ಜೋಡಣೆ ತೀರಾ ಅವಶ್ಯಕವಾಗಿದೆ. ಕೇಂದ್ರ ಸರ್ಕಾರದ ಜಲನೀತಿ ಅನ್ವಯ ವರದಾ-ಬೇಡ್ತಿ ನದಿ ಜೋಡಣೆ ಪ್ರಸ್ತಾಪ ಸರ್ಕಾರದ ಮುಂದಿದೆ. 2003ರಲ್ಲಿಯೇ ಕೇಂದ್ರದ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ ಅಧ್ಯಯನ ನಡೆಸಿ ಯೋಜನೆ ಸರಿಯಾಗಿದೆ ಎಂದು ಪ್ರಸ್ತಾಪಿಸಿದೆ. 2011ರಲ್ಲಿ ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಸಮಗ್ರ ಯೋಜನಾ ವರದಿ ತಯಾರಿಸಲು ಸೂಚಿಸಿದೆ.
ಬೇಡ್ತಿ- ವರದಾ ನದಿಗಳ ಜೋಡಣೆಯಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ 6 ಜಿಲ್ಲೆಗಳ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಬೃಹತ್ ಯೋಜನೆಯಾಗಿದೆ. ಇದರಿಂದ ಹಾವೇರಿ ಜಿಲ್ಲೆ ಸಂಪೂರ್ಣ ನೀರಾವರಿಯಾಗಲಿದ್ದು, ಒಟ್ಟು 16 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಶಕ್ತಿ ಇದಕ್ಕಿದೆ. ಎಲ್ಲ ಪಟ್ಟಣ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸುವ ಶಕ್ತಿಯನ್ನು ಹೊಂದಿದೆ. ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದಶಿರ್ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೇಡ್ತಿ-ವರದಾ ನದಿ ಜೋಡಣೆ ಹೋರಾಟಕ್ಕೆ ಎಲ್ಲ ಮಠಾಧೀಶರು, ಸಾಹಿತಿಗಳು, ಪ್ರಗತಿಪರ ಸಂಘಟನೆಗಳು, ವಕೀಲರು, ಕನ್ನಡ ಪರ, ಕಾಮಿರ್ಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿದ್ಯಾಥಿರ್ ಒಕ್ಕೂಟಗಳು, ನೌಕರರ ಸಂಘಟನೆ, ವ್ಯಾಪಾರಸ್ಥರು ಬೆಂಬಲ ನೀಡಬೇಕು. ಅದೇ ರೀತಿ ತುಂಗಾ ಮೇಲ್ದಂಡೆ ಯೋಜನೆಯಡಿ ಎಷ್ಟು ಟಿಎಂಸಿ ನೀರು ಕೊಡಬೇಕೋ ಅಷ್ಟು ಕೊಡುತ್ತಿಲ್ಲ. ಕಾಲುವೆಗಳ ದುರಸ್ತಿ ಮಾಡಿಸಿ ನೀರು ಬಿಡಬೇಕು. ರಟ್ಟೀಹಳ್ಳಿ, ರಾಣೆಬೆನ್ನೂರ, ಹಾವೇರಿವರೆಗೂ ಯುಟಿಪಿ ಕಾಲುವೆ ಇದ್ದು, ಉಳಿದ ತಾಲೂಕುಗಳಿಗೂ ಲೀಫ್ಟ್ ಇರ್ರಿಗೇಷನ್ ಮೂಲಕ ನೀರು ಪೂರೈಸುವ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ಶಾಸಕರು ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಮರಿಗೌಡ ಪಾಟಿಲ, ಸುರೇಶ ಚಲವಾದಿ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಅಣ್ಣಿ, ಮಲ್ಲನಗೌಡ ಮಾಳಗಿ, ಶಿವಯೋಗಿ ಹೊಸಗೌಡ್ರ, ವಿರುಪಾಕ್ಷಪ್ಪ ಗುಡಗೂರ, ಮಹದೇವಪ್ಪ ಬಣಕಾರ, ರವಿ ಅಂಗಡಿ, ನಂದೀಶ ಮಾಳಗಿ, ಮಲ್ಲಿಕಾರ್ಜುನ ಸತಗಿಹಳ್ಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.