ನ್ಯೂಸ್

ಒಕ್ಕಲಿಗರ ಸಂಘದ ಚುನಾವಣೆ: 3 ಜಿಲ್ಲೆಯ ಫಲಿತಾಂಶ ತಡರಾತ್ರಿ ಪ್ರಕಟ, 35 ಸ್ಥಾನಕ್ಕೆ ಗೆದ್ದವರ ಲಿಸ್ಟ್ ಇಲ್ಲಿದೆ

ಬೆಂಗಳೂರು: ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ತೀವ್ರ ಕೂತೂಹಲ ಮೂಡಿಸಿದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ 35 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ 20 ಸ್ಥಾನಗಳ ಫಲಿತಾಂಶ ಬುಧವಾರ ಸಂಜೆ ವೇಳೆಗೆ ಪ್ರಕಟಗೊಂಡಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರದ 15 ಸ್ಥಾನಗಳ ಮತ ಎಣಿಕೆ ಕಾರ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿನ ತ್ರಿಪುರ ವಾಸಿನಿ ಕಲ್ಯಾಣ ಮಂಟಪದಲ್ಲಿ ಬುಧವಾರ ರಾತ್ರಿ 10.30ರವರೆಗೂ ಮುಂದುವರಿದಿತ್ತು. ಅಂತಿಮವಾಗಿ ತಡರಾತ್ರಿ ಫಲಿತಾಂಶ ಪ್ರಕಟವಾಯಿತು.

ಚನ್ನರಾಯಪಟ್ಟಣ ಶಾಸಕ ಸಿ.ಎನ್​.ಬಾಲಕೃಷ್ಣ, ಬಿ.ಪಿ.ಮಂಜೇಗೌಡ, ಕುಣಿಗಲ್​ನ ಮಾಜಿ ಶಾಸಕ ನಾಗರಾಜಯ್ಯ ಅವರ ಮಗ ಲೋಕೇಶ್​ ಡಿ.ನಾಗರಾಜಯ್ಯ ಸೇರಿ ಪ್ರಮುಖ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಡಿ.12ರಂದು ನಡೆದ ಚುನಾವಣೆಯಲ್ಲಿ 5,20,721 ಮತದಾರರ ಪೈಕಿ ಒಟ್ಟು 3,71,679 ಮಂದಿ ಮತದಾನ ಮಾಡಿದ್ದರು. ಒಟ್ಟು ಶೇ.71 ಮತದಾನವಾಗಿತ್ತು. 13 ಜಿಲ್ಲೆಗಳಿಂದ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ರಾಮನಗರದಲ್ಲಿ ಒಟ್ಟು 141 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಮೂರು ಜಿಲ್ಲೆಗಳ ಮತ ಎಣಿಕೆ ಅರಮನೆ ಮೈದಾನದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ನಡೆಯಿತು. ಉಳಿದ ಜಿಲ್ಲೆಗಳ ಮತ ಎಣಿಕೆ ಪ್ರಕ್ರಿಯೆ ಬೇಗ ಮುಗಿದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಯಿತು.

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ವಿಜೇತರ ಹೆಸರು ಮತ್ತು ಪಡೆದ ಮತಗಳ ವಿವರ ಇಲ್ಲಿದೆ

ಮೈಸೂರು

ಕೆ.ವಿ.ಶ್ರೀಧರ್​- 12267 ಮತ

ಸಿ.ಜಿ.ಗಂಗಾಧರ್- 10174 ಮತ

ಎಂ.ಬಿ.ಮಂಜೇಗೌಡ- 8790 ಮತ

ಮಂಡ್ಯ

ಅಶೋಕ್​ ಎಸ್​.ಡಿ.ಜಯರಾಮ್​- 55721 ಮತ

ಎನ್​.ಬಾಲಕೃಷ್ಣ- 38622 ಮತ

ಚಂದ್ರಶೇಖರ್​- 36628 ಮತ

ರಾಘವೇಂದ್ರ- 33986 ಮತ

ಹಾಸನ

ಸಿ.ಎನ್​.ಬಾಲಕೃಷ್ಣ- 32311 ಮತ

ಎಸ್​.ಎಸ್​.ರುದ್ರೇಗೌಡ- 30555 ಮತ

ಬಿ.ಪಿ.ಮಂಜೇಗೌಡ- 20388 ಮತ

ತುಮಕೂರು

ಹನುಮಂತರಾಯಪ್ಪ- 14901 ಮತ

ಲೋಕೇಶ್​ ಡಿ.ನಾಗರಾಜಯ್ಯ- 11027 ಮತ

ಚಿತ್ರದುರ್ಗ

ಜೆ.ರಾಜು- 4074 ಮತ

ಕೋಲಾರ ಮತ್ತು ಚಿಕ್ಕಬಳ್ಳಾಪುರ

ಡಾ.ಡಿ.ಕೆ.ರಮೇಶ್​- 40435 ಮತ

ಟಿ.ಕೋನಪ್ಪರೆಡ್ಡಿ- 32451 ಮತ

ಎಲುವಳ್ಳಿ ಎನ್​.ರಮೇಶ್​- 24676 ಮತ

ದಕ್ಷಿಣ ಕನ್ನಡ ಮತ್ತು ಉಡುಪಿ

ಡಾ.ಕೆ.ವಿ.ರೇಣುಕಾಪ್ರಸಾದ್​-3309

ಕೊಡಗು

ಎಚ್​.ಎನ್​.ರವೀಂದ್ರ- 9157

ಶಿವಮೊಗ್ಗ ಮತ್ತು ಉತ್ತರ ಕನ್ನಡ

ಎಸ್​.ಕೆ.ಧಮೇಶ್​​- 5808 ಮತ

ಚಿಕ್ಕಮಗಳೂರು

ಎ.ಪೂರ್ಣೇಶ್​- 20144 ಮತ

ಬೆಂಗಳೂರು ಕ್ಷೇತ್ರ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ)

ಡಾ. ಅಂಜನಪ್ಪ- 68938

ಅಶೋಕ್ ತಮ್ಮಾಜಿ- 61893

ಕೆಂಚಪ್ಪಗೌಡ- 58066

ಆರ್ ಪ್ರಕಾಶ್- 56694

ಎಚ್.ಸಿ ಜಯಮುತ್ತು- 56254

ಹಾಪ್ ಕಾಮ್ಸ್ ದೇವರಾಜು- 55903

ಎಲ್.ಶ್ರೀನಿವಾಸ್- 49217

ಸಿ.ಎಂ ಮಾರೇಗೌಡ- 48492

ರಾಜಶೇಖರಗೌಡ- 46180

ಕೆ.ಎಸ್. ಸುರೇಶ್- 45601

ಉಮಾಪತಿ- 44709

ಚಕ್ಕೆರೆ ವೆಂಕಟರಾಮೇಗೌಡ- 43022

ಹನುಮಂತಯ್ಯ- 41687

ತೌಟನಹಳ್ಳಿ ಪುಟ್ಟಸ್ವಾಮಿ- 41165

ಡಾ. ನಾರಾಯಣಸ್ವಾಮಿ- 40728

ಹಳಬರಿಗೆ ಕೊಕ್, ಹೊಸಬರಿಗೆ ಜೈ ಎಂದ ಮತದಾರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯಲ್ಲಿ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹಳಬರಿಗೆ ಕೊಕ್ ಎಂದ ಮತದಾರರು ಹೊಸಬರಿಗೆ ಜೈ ಎಂದಿದ್ದಾರೆ. ಸಂಘದಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಆಸ್ತಿ ಪರಭಾರೆ ವಿವಾದ, ಸಂಘ ಸೂಪರ್‍ಸೀಡ್ ಹೀಗೆ ನಾನಾ ಕಾರಣಗಳಿಂದ ಈ ಬಾರಿಯ ಸಂಘದ ಚುನಾವಣೆ ತೀವ್ರ ಕೂತೂಹಲಕ್ಕೆ ಕಾರಣವಾಗಿತ್ತು. ಸಂಘದ ಅಭಿವೃದ್ಧಿ ಹಾಗೂ ಈ ಹಿಂದಿನ ಅವಧಿಯಲ್ಲಿನ ಲೋಪದೋಷಗಳು ಈ ಚುನಾವಣೆಯ ಪ್ರಮುಖ ಆಧಾರವಾಗಿತ್ತು. ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಕೆಂಚಪ್ಪಗೌಡ ತಂಡ, ಡಾ. ಅಂಜನಪ್ಪ ತಂಡ, ಪ್ರೊ. ನಾಗರಾಜು ತಂಡ, ಈ ಹಿಂದಿನ ಅವಧಿಯ ನಿರ್ದೇಶಕ ಎಚ್.ಸಿ.ಜಯಮುತ್ತು ನೇತೃತ್ವದ ತಂಡ, ಒಕ್ಕಲಿಗ ಫೌಂಡೇಷನ್ ತಂಡದ ಜತೆಗೆ ಹಲವು ಸಮಾನ ಮನಸ್ಕರು ತಂಡಗಳನ್ನು ರಚಿಸಿಕೊಂಡು ಚುನಾವಣೆ ಎದುರಿಸಿದ್ದರು. ಸಂಘದ ನಿರ್ದೇಶಕರಾಗಿ ಆಯ್ಕೆಯಾಗಲು ನಡೆದ ತೀವ್ರ ಹೋರಾಟದಲ್ಲಿ ಬಹುತೇಕ ಹೊಸಮುಖಗಳು ಗೆದ್ದು ಬೀಗಿವೆ. ಕೆಂಚಪ್ಪಗೌಡ, ಎಚ್.ಸಿ.ಜಯಮುತ್ತು ಹೊರತುಪಡಿಸಿ ಮಿಕ್ಕವರೆಲ್ಲರೂ ಸಂಘಕ್ಕೆ ಹೊಸ ಮುಖಗಳಾಗಿವೆ.