ಸೊರಬ: ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಕಾಯಕವು ತಾಯಿ ಮಾಡುವಂತಹ ಕಾರ್ಯಕ್ಕೆ ಸಮನಾದುದು. ಶುಶ್ರೂಷಕರ ಕರ್ತವ್ಯವನ್ನು ದುಡಿಮೆ ಎಂದು ಪರಿಗಣಿಸದೆ ಸೇವೆ ಎಂದು ಭಾವಿಸಬೇಕು ಎಂದು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರಸೂತಿ ತಜ್ಞ ಡಾ. ನಾಗೇಂದ್ರಪ್ಪ ತಿಳಿಸಿದರು.
ಪಟ್ಟಣದ ರಂಗಮಂದಿರದಲ್ಲಿ ಎಚ್‌ಪಿಆರ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕಲ್ ಕಾಲೇಜ್‌ನಿಂದ ಸೋಮವಾರ ಆಯೋಜಿಸಿದ್ದ ದಾದಿಯರ ದಿನ, ಲ್ಯಾಂಪ್ ಲೈಟಿಂಗ್ ಮತ್ತು ಜಿಎನ್‌ಎಂ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವೆಯನ್ನು ಪರಿಗಣಿಸಿ ಅವರ ಜನ್ಮದಿನಾಚರಣೆ ನೆನಪಿಗಾಗಿ ಪ್ರತಿವರ್ಷ ಮೇ 13ರಂದು ದಾದಿಯರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಅವರು ಪ್ರತಿಯೊಬ್ಬ ಶುಶ್ರೂಷಕರಿಗೆ ಮಾದರಿ. ಅವರ ಮಾರ್ಗದಲ್ಲೇ ಮುನ್ನಡೆಯಬೇಕು ಎಂದರು.
ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಜನಸಂಖ್ಯೆಯನ್ನು ಆಧರಿಸಿ ಮತ್ತಷ್ಟು ಸೌಲಭ್ಯ ಕಲ್ಪಿಸಬೇಕಿದೆ. 300 ಜನರಿಗೆ ಒಬ್ಬ ದಾದಿಯರು ಇರಬೇಕು ಎಂಬ ನಿಯಮಿದೆ. ಆದರೆ ಸಾವಿರ ಜನರಿಗೆ ಒಬ್ಬ ಶುಶ್ರೂಷಕಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಸಮಸ್ಯೆ ಎದುರಾಗದಂತೆ ಹೊಣೆ ನಿಭಾಯಿಸುತ್ತಿದ್ದಾರೆ. ಸಾರ್ವಜನಿಕರು ಸಹ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಗೌರವ ನೀಡುವ ಜತೆಗೆ ಸಹಕಾರ ನೀಡಬೆಕು ಎಂದು ಮನವಿ ಮಾಡಿದರು.
ಪ್ಯಾರಾಮೆಡಿಕಲ್ ಶಿಕ್ಷಣಕ್ಕಾಗಿ ಗ್ರಾಮೀಣ ವಿದ್ಯಾರ್ಥಿಗಳು ಮಹಾನಗರಗಳತ್ತ ಹೋಗಬೇಕಾಗಿತ್ತು. ಆದರೆ ಪಟ್ಟಣದಲ್ಲೇ ಕಾಲೇಜು ಆರಂಭವಾಗಿರುವುದು ಹಲವರಿಗೆ ಬದುಕು ಕಟ್ಟಿಕೊಟ್ಟಿದೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ದೇಶ, ವಿದೇಶಗಳಲ್ಲಿ, ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶುಶ್ರೂಷಕರಾಗಿ ಹೊರಹೊಮ್ಮುವ ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ, ನಂಬಿಕೆ ಮತ್ತು ಗೌಪತ್ಯೆ ಕಾಪಾಡಿಕೊಳ್ಳಬೇಕು. ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಶುಶ್ರೂಷಕರಾದ ಎಚ್.ಎನ್.ಜಯಮ್ಮ, ಸುಶೀಲಮ್ಮ ಲಿಂಗರಾಜು, ಸುವರ್ಣಾ ಎಲ್. ನಾಯ್ಕ, ದಿಲ್‌ಶಾದ್ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ಪ್ರಾಚಾರ್ಯ ಎಸ್.ಮಂಜುನಾಥ್, ಲಯನ್ಸ್ ಜಿಲ್ಲಾ ಮಾಜಿ ಗೌರ್ನರ್ ಎಚ್.ಎಸ್.ಮಂಜಪ್ಪ, ಜಿಲ್ಲಾ ಕ್ಯಾಬಿನೆಟ್ ಸದಸ್ಯ ಇ.ಡಿ.ಶ್ರೀಧರ್, ಸಾಗರ ಅಧ್ಯಕ್ಷೆ ಪ್ರಭಾವತಿ ಶ್ರೀಧರ್, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಭು ಸಾಹುಕಾರ್, ಅರಿವಳಿಕೆ ತಜ್ಞ ಡಾ. ಎಚ್.ಕೆ.ಸುರೇಶ್, ವಕೀಲ ದಿನಕರ ಭಾವೆ, ಎಂ.ಬಿ.ಶಿಲ್ಪಾ, ಎಚ್.ಕೆ. ಜ್ಯೋತಿ, ಜಿ.ಭಾಗ್ಯಾ, ಬಸಮ್ಮ ಇತರರಿದ್ದರು.