ನ್ಯೂಸ್

'ದಳಪತಿ 68': ವಿಜಯ್ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ!

ಮೋಹನ್​ ಶೆಟ್ಟಿ

ತಮಿಳುನಾಡು: ಕಾಲಿವುಡ್​ನ ಸ್ಟಾರ್​ ನಟ, ದಳಪತಿ ವಿಜಯ್ ಮತ್ತು ನಿರ್ದೇಶಕ ವೆಂಕಟ್ ಪ್ರಭು ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ದಳಪತಿ 68' ಸಿನಿಮಾ ಸದ್ಯ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಬಗ್ಗೆ ಪ್ರತಿಯೊಂದು ಅಪ್ಡೇಟ್​ ತಿಳಿಯಲು ಬಹಳ ಕುತೂಹಲದಿಂದ ಕಾಯುತ್ತಿರುವ ವಿಜಯ್ ಫ್ಯಾನ್ಸ್​ಗೆ ಇದೀಗ ಹೊಸ ಮಾಹಿತಿಯೊಂದು ಲಭಿಸಿದೆ.

ಎಜಿಎಸ್ ಎಂಟರ್‌ಟೈನ್‌ಮೆಂಟ್‌ನ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಾತ್ಕಾಲಿಕವಾಗಿ 'ದಳಪತಿ 68' ಎಂಬ ಟೈಟಲ್ ಇಟ್ಟಿರುವ ಚಿತ್ರತಂಡ, ಅಧಿಕೃತ ಶೀರ್ಷಿಕೆಯನ್ನು ಯಾವಾಗ ಘೋಷಿಸಲಿದೆ? ಏನೆಂದು ಇಡಬಹುದು ಎಂಬ ಕುತೂಹಲ ಸಿನಿಪ್ರೇಕ್ಷಕರಲ್ಲಿ ಕಾಡುತ್ತಿದೆ. ಈ ಮಧ್ಯೆ ಹೊಚ್ಚ ಹೊಸ ಮಾಹಿತಿ ತಿಳಿಯಲು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಿನಿಮಾದ ಫಸ್ಟ್​ ಲುಕ್ ಪೋಸ್ಟರ್​ ಬಿಡುಗಡೆ ಕುರಿತಂತೆ ಇದೀಗ ಅಪ್ಡೇಟ್​ ನೀಡಿದೆ.

ಇಂದು ಸಂಜೆ 6 ಗಂಟೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದು, ಹೇಗಿರಲಿದೆ ವಿಜಯ್​ ಅವರ ಲುಕ್? ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದಲ್ಲಿ ವಿಜಯ್​ಗೆ ನಾಯಕಿಯಾಗಿ ಮೀನಾಕ್ಷಿ ಚೌಧರಿ ಕಾಣಿಸಿಕೊಂಡಿದ್ದು, ಮೈಕ್ ಮೋಹನ್, ಜಯರಾಮ್, ಸ್ನೇಹಾ, ಲೈಲಾ, ಯೋಗಿಬಾಬು, ವಿಟಿವಿ ಗಣೇಶ್, ಅಜ್ಮಲ್ ಅಮೀರ್, ವೈಭವ್, ಪ್ರೇಮ್ಗಿ, ಅಜಯ್ ರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).