ನ್ಯೂಸ್

ಬದಲಾಯ್ತು ರಜನಿಕಾಂತ್ ಬಹುನಿರೀಕ್ಷಿತ​ 'ತಲೈವರ್ 170' ಟೈಟಲ್​?

ತಮಿಳುನಾಡು: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ 'ತಲೈವರ್ 170' ಚಿತ್ರದ ಟೈಟಲ್​ನಲ್ಲಿ ಈಗ ಬದಲಾವಣೆಯಾಗಿದ್ದು, ರಜನಿ ಮುಂದಿನ ಸಿನಿಮಾಗೆ ಹೊಸ ಶೀರ್ಷಿಕೆ ಇಡಲಾಗಿದೆ ಎಂಬ ಸುದ್ದಿ ಸದ್ಯ ಕಾಲಿವುಡ್​ನಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇತ್ತೀಚೆಗಷ್ಟೇ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್‌' ಚಿತ್ರವು ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ​ ಅದ್ಭುತ ಯಶಸ್ಸನ್ನು ಗಳಿಸುವ ಮುಖೇನ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಸದ್ಯ ಇದೇ ಸಾಲಿಗೆ ತಲೈವಾ ನಟನೆಯ 'ತಲೈವರ್​ 170' ಕೂಡ ಸೇರಲಿದೆ ಎಂಬ ಲೆಕ್ಕಾಚಾರಗಳನ್ನು ಮಾಡಿಕೊಂಡಿರುವ ರಜನಿ ಅಭಿಮಾನಿಗಳಿಗೆ ಇದೀಗ ಹೊಸ ಸುದ್ದಿಯೊಂದು ಸಾಕಷ್ಟು ಕುತೂಹಲ ಕೆರಳಿಸಿದೆ.

ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ನಡಿ ಮೂಡಿಬರಲಿರುವ ರಜನಿಕಾಂತ್ ಅವರ ಮುಂಬರುವ 'ತಲೈವರ್ 170' ಚಿತ್ರದ ಶೀರ್ಷಿಕೆಯಲ್ಲಿ ಬದಲಾವಣೆ ಕಂಡುಬಂದಿದ್ದು, 'ವೆಟ್ಟೈಯಾನ್' ಎಂಬ ಟೈಟಲ್ ಶೀಘ್ರವೇ​ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿಸಲಾಗಿದೆ.

ಟಿಜೆ ಜ್ಞಾನವೇಲ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ,(ಏಜೆನ್ಸೀಸ್).