ಹಂದಿ ಕಿಡ್ನಿಯೊಂದಿಗೆ ಹೊಸ ಜೀವನ ಕಂಡ ಅಮೆರಿಕ ಮಹಿಳೆ 
ನ್ಯೂಸ್

ಅಂಗಾಂಗ ಕಸಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಹಂದಿ ಕಿಡ್ನಿಯೊಂದಿಗೆ ಒಂದು ವರ್ಷ ಪೂರೈಸಿದ 58ರ ಮಹಿಳೆ | Pig Kidney Transplant

Pig Kidney Transplant: ಅಂಗಾಂಗ ಕಸಿ ಕ್ಷೇತ್ರದಲ್ಲಿ ಅಮೆರಿಕದ ಮಹಿಳೆಯೊಬ್ಬರು ಹೊಸ ದಾಖಲೆ ಬರೆದಿದ್ದಾರೆ. ತಳೀಯವಾಗಿ ಬದಲಾಯಿಸಿದ ಹಂದಿಯ ಕಿಡ್ನಿಯೊಂದಿಗೆ 58 ವರ್ಷದ ಮೊಲ್ಲಿ ಫಾಲ್ಕೊ ಒಂದು ವರ್ಷ ಪೂರೈಸಿದ್ದಾರೆ. ನ್ಯೂ ಹ್ಯಾಂಪ್‌ಶೈರ್‌ನ ನಿವಾಸಿಯಾದ ಅವರು, ಪ್ರಾಣಿಯಿಂದ ಕಸಿ ಪಡೆದ ಕಿಡ್ನಿಯೊಂದಿಗೆ ಇಷ್ಟು ದೀರ್ಘಕಾಲ ಬದುಕಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೊಲ್ಲಿ ಫಾಲ್ಕೊ ಅವರಿಗೆ 2025ರ ನವೆಂಬರ್‌ನಲ್ಲಿ ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಹಂದಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಪ್ರಯೋಗಾತ್ಮಕ ಶಸ್ತ್ರಚಿಕಿತ್ಸೆಗೆ ಒಳಗಾದ ನಾಲ್ಕನೇ ವ್ಯಕ್ತಿ ಇವರಾಗಿದ್ದಾರೆ. ಅಂಗಾಂಗ ದಾನಿಗಳ ಕೊರತೆಯಿಂದಾಗಿ ಕಿಡ್ನಿ ಕಸಿಗಾಗಿ ಕಾಯುತ್ತಿರುವ ಸಾವಿರಾರು ರೋಗಿಗಳಿಗೆ ಈ ಬೆಳವಣಿಗೆ ಹೊಸ ಭರವಸೆ ಮೂಡಿಸಿದೆ ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ವೈದ್ಯಕೀಯ ವಿಜ್ಞಾನದಲ್ಲಿ ಮಹತ್ವದ ಹೆಜ್ಜೆ

ಮ್ಯಾಸಚೂಸೆಟ್ಸ್ ಜನರಲ್ ಬ್ರಿಗಮ್ ಟ್ರಾನ್ಸ್‌ಪ್ಲಾಂಟ್ ಸೆಂಟರ್‌ನ ಕಿಡ್ನಿ ಕಸಿ ವಿಭಾಗದ ನಿರ್ದೇಶಕ ಡಾ. ಲಿಯೊನಾರ್ಡೊ ರಿಯೆಲ್ಲಾ ಈ ಸಾಧನೆಯನ್ನು ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಹಂದಿ ಕಿಡ್ನಿ ಮಾನವ ದೇಹದಲ್ಲಿ ಕಾರ್ಯನಿರ್ವಹಿಸಲು ಸಾಧ್ಯ ಎಂಬ ವಿಶ್ವಾಸ ಈ ಸಾಧನೆಯಿಂದ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಇದನ್ನು ಸಂಪೂರ್ಣ ಯಶಸ್ಸು ಎಂದು ಘೋಷಿಸಲು ಇನ್ನೂ ಸಮಯ ಬೇಕಿದೆ ಎಂದು ಎಚ್ಚರಿಸಿದ್ದಾರೆ.

ಏನಿದು ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್?

ಒಂದು ಪ್ರಾಣಿ ಪ್ರಭೇದದಿಂದ ಮತ್ತೊಂದು ಪ್ರಭೇದದ ಮಾನವರಿಗೆ ಅಂಗಾಂಗ ಅಥವಾ ಅಂಗಾಂಶಗಳನ್ನು ಕಸಿ ಮಾಡುವ ವಿಧಾನವನ್ನು 'ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್' (Xenotransplantation) ಎಂದು ಕರೆಯಲಾಗುತ್ತದೆ. 2024ರಲ್ಲಿ ಮ್ಯಾಸಚೂಸೆಟ್ಸ್ ಜನರಲ್ ಬ್ರಿಗಮ್ ಆಸ್ಪತ್ರೆ ಜಗತ್ತಿನ ಮೊದಲ ತಳೀಯವಾಗಿ ಮಾರ್ಪಡಿಸಿದ ಹಂದಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ರಿಕ್ ಸ್ಲೇಮನ್ ಎಂಬ ವ್ಯಕ್ತಿಗೆ ನಡೆಸಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಅವರು 52 ದಿನ ಬದುಕಿದ್ದರು. ನಂತರ ಕಸಿ ಮಾಡಿದ ಕಿಡ್ನಿಗೆ ಸಂಬಂಧವಿಲ್ಲದ ಹೃದಯ ಸಮಸ್ಯೆಯಿಂದ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.

2025ರಲ್ಲಿ ಟಿಮ್ ಆಂಡ್ರ್ಯೂಸ್ ಎರಡನೇ ರೋಗಿಯಾಗಿ ಹಂದಿ ಕಿಡ್ನಿ ಪಡೆದಿದ್ದರು. ಅವರ ದೇಹದಲ್ಲಿ 271 ದಿನಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಆ ಕಿಡ್ನಿಯನ್ನು ತೆಗೆದುಹಾಕಲಾಗಿತ್ತು. ನಂತರ ಅವರಿಗೆ ಮೃತ ಮಾನವ ದಾನಿಯಿಂದ ಕಿಡ್ನಿ ಕಸಿ ಮಾಡಲಾಯಿತು.

ಡಯಾಲಿಸಿಸ್‌ನಿಂದ ಮುಕ್ತಿ

ಮೊಲ್ಲಿ ಫಾಲ್ಕೊ ಅವರಿಗೆ ಹುಟ್ಟಿನಿಂದಲೇ ಇದ್ದ ಆರೋಗ್ಯ ಸಮಸ್ಯೆಯಿಂದ 50ನೇ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಸುಮಾರು ಒಂದು ವರ್ಷ ಕಾಲ ಅವರು ನಿಯಮಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಈಜುಕೊಳಕ್ಕೆ ಬಿದ್ದ ಪುಟ್ಟ ಕಂದಮ್ಮನನ್ನು ಕಾಪಾಡಿದ ಶ್ವಾನ; ಹೀರೋ ಡಾಗ್ ಸಾಹಸಕ್ಕೆ ನೆಟ್ಟಿಗರ ಮೆಚ್ಚುಗೆ | Hero Dog

ಹಂದಿ ಕಿಡ್ನಿ ಕಸಿ ಮಾಡಿಸಿಕೊಳ್ಳುವ ಅವಕಾಶ ಅವರಿಗೆ ಹೊಸ ಭರವಸೆ ನೀಡಿತ್ತು. ಇದೀಗ ಶಸ್ತ್ರಚಿಕಿತ್ಸೆಯಾಗಿ ಒಂದು ವರ್ಷ ಕಳೆದಿದ್ದು, ಅವರು ಡಯಾಲಿಸಿಸ್ ನೆರವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಅಂಗಾಂಗ ಕಸಿ ಕ್ಷೇತ್ರದಲ್ಲಿ ಈ ಸಾಧನೆ ಭವಿಷ್ಯದ ಚಿಕಿತ್ಸಾ ವಿಧಾನಗಳ ಬಗ್ಗೆ ಹೊಸ ನಿರೀಕ್ಷೆ ಮೂಡಿಸಿದೆ.