ಎನ್.ಆರ್.ಪುರ: ಶೃಂಗೇರಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು 256 ಮತಗಟ್ಟೆಗಳಲ್ಲಿ 1,68,951 ಮತದಾರರು ಶುಕ್ರವಾರ ಮತ ಚಲಾಯಿಸಲಿದ್ದಾರೆ. ಇವರಲ್ಲಿ 82,260 ಪುರುಷ ಹಾಗೂ 86,690 ಮಹಿಳಾ ಮತದಾರರು ಇದ್ದಾರೆ. ಗುರುವಾರ ಮಧ್ಯಾಹ್ನದಿಂದಲೇ ಕೊಪ್ಪ ತಾಲೂಕು ಕಚೇರಿಯಿಂದ ಚುನಾವಣಾ ಸಿಬ್ಬಂದಿ ಬಸ್‌ಗಳಲ್ಲಿ ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಿಗೆ ತೆರಳಿ ಸಂಬಂಧ ಪಟ್ಟ ಮತಗಟ್ಟೆಗಳಿಗೆ ಹೋಗಿ ಚುನಾವಣೆಗಾಗಿ ಸಿದ್ಧತೆ ಮಾಡಿಕೊಂಡರು.
ಎನ್.ಆರ್.ಪುರ ತಾಲೂಕಿನಲ್ಲಿ 76 ಮತಗಟ್ಟೆಗಳಿದ್ದು ಇದರಲ್ಲಿ ಪಟ್ಟಣದ ಕೆಪಿಎಸ್‌ನ ಮತಗಟ್ಟೆ ಸಂಖ್ಯೆ-24 ಹಾಗೂ ಗುಬ್ಬಿಗಾ ಗ್ರಾಪಂ ಮತಗಟ್ಟೆ ಸಂಖ್ಯೆ-41ಕ್ಕೆ ಸಖಿ ಮತಗಟ್ಟೆ ಎಂದು ನಾಮಕರಣ ಮಾಡಲಾಗಿದ್ದು ಈ ಮತಗಟ್ಟೆಗಳನ್ನು ಸಿಂಗರಿಸಲಾಗಿದೆ. ಯುವ ಮತದಾರರನ್ನು ಸೆಳೆಯಲು ಮೆಣಸೂರು ಗ್ರಾಪಂ ಮತಗಟ್ಟೆ ಸಂಖ್ಯೆ-26ಕ್ಕೆ ಯುವ ಮತದಾರರ ಮತಗಟ್ಟೆ ಎಂದು ನಾಮಕರಣ ಮಾಡಲಾಗಿದೆ. ಅಂಗವಿಕಲರಿಗಾಗಿ ನಾಗಲಾಪುರ ಗ್ರಾಪಂಯ ಮತಗಟ್ಟೆ ಸಂಖ್ಯೆ 46ನ್ನು ಗುರುತಿಸಿ ಸಿಂಗಾರ ಮಾಡಲಾಗಿದೆ. ಬಿ.ಕಣಬೂರು ಗ್ರಾಪಂ ಮತಗಟ್ಟೆ ಸಂಖ್ಯೆ 208ನ್ನು ಬೆಳೆ ಆಧಾರಿತ ಮತಗಟ್ಟೆ ಎಂದು ನಾಮಕರಣ ಮಾಡಿದ್ದು ಕಾಫಿ, ಅಡಕೆ ಮುಂತಾದ ಚಿತ್ರಗಳನ್ನು ಬರೆಯಲಾಗಿದೆ.
ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುನಾವಣೆಗಾಗಿ ಪೊಲೀಸರು ಎಲ್ಲ ಬಂದೋಬಸ್ತ್ ಮಾಡಿದ್ದಾರೆ. ಪ್ರತಿ ಮತಗಟ್ಟೆಗೆ ಒಬ್ಬ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಸೂಕ್ಷ್ಮ ಮತಗಟ್ಟೆಗಳಿಗೆ ಇಬ್ಬರು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಿದ ಎನ್.ಆರ್.ಪುರ ತಾಲೂಕಿನ ಕಳ್ಳಿಕೊಪ್ಪ ಹಾಗೂ ಮೂಡಬಾಗಿಲು ಮತಗಟ್ಟೆಗೆ ಅರೆಸೇನಾ ಪಡೆಗಳನ್ನು ನೇಮಿಸಲಾಗಿದೆ ಎಂದು ಎನ್.ಆರ್.ಪುರ ಪಿಎಸ್‌ಐ ಬಿ.ಎಸ್.ನಿರಂಜನಗೌಡ ತಿಳಿಸಿದ್ದಾರೆ.