ನ್ಯೂಸ್

ಉನ್ನತ ಶಿಕ್ಷಣಕ್ಕೆ ಹೊಸ ರೂಪ: ಸುಧಾರಣಾ ಕ್ರಮಕ್ಕೆ ಸರ್ಕಾರ ನಿರ್ಧಾರ; ಏಕೀಕೃತ ನೇಮಕ ವ್ಯವಸ್ಥೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಹಲವು ಸುಧಾರಣೆಗಳನ್ನು ತರಲು ಸರ್ಕಾರ ಮುಂದಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಇಡೀ ವ್ಯವಸ್ಥೆ ಹೊಸ ರೂಪ ಪಡೆಯಲಿದೆ. ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾದಂತೆ ಯಾವುದೇ ನಿಯಂತ್ರಣವಿಲ್ಲದೇ ಶಿಕ್ಷಣ ವ್ಯವಸ್ಥೆ ಸಾಗುತ್ತಿದೆ. ಅದಕ್ಕೆಲ್ಲ ತಡೆ ಹಾಕುವ ಮೂಲಕ ಏಕೀಕೃತ ವ್ಯವಸ್ಥೆ ಜಾರಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ. ವಿಶ್ವವಿದ್ಯಾಲಯಗಳ ಹಂತದಲ್ಲಿ ಈಗ ಶುಲ್ಕ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ, ಶೈಕ್ಷಣಿಕ ವರ್ಷದ ಆರಂಭ, ರಜೆಗಳು, ಬೋಧಕರ ನೇಮಕ ಹೀಗೆ ವಿವಿಧ ವಿಷಯಗಳಲ್ಲಿ ಒಂದೇ ರೀತಿಯಲ್ಲಿಲ್ಲ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದಲೇ ಸರ್ಕಾರ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಒಂದೇ ಮಾದರಿಯ ವ್ಯವಸ್ಥೆಯನ್ನು ತರಲು ನಿರ್ಧರಿಸಿದೆ. ಕಳೆದ ಎರಡು ಮೂರು ವರ್ಷಗಳಿಂದ ಈ ನಿಟ್ಟಿನಲ್ಲಿ ನಡೆಯುತ್ತಿದ್ದ ಚರ್ಚೆಗಳೆಲ್ಲ ಈಗ ಒಂದು ಹಂತಕ್ಕೆ ಬಂದಿವೆ.

ನೇಮಕಕ್ಕೆ ಕೇಂದ್ರೀಕೃತ ವ್ಯವಸ್ಥೆ: ವಿಶ್ವವಿದ್ಯಾಲಯಗಳ ನೇಮಕಾತಿಗಳಲ್ಲಿ ಅಕ್ರಮಗಳು ನಡೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ವಿವಿಧ ಬೋಧಕರ ಹುದ್ದೆಗಳಿಗೆ ರಾಜ್ಯ ಮಟ್ಟದಲ್ಲಿ ಪರೀಕ್ಷೆ ನಡೆಸಿ ಅರ್ಹರ ಪಟ್ಟಿ ಮಾಡಿ ಇರಿಸಲಾಗುತ್ತದೆ. ಯಾವುದೇ ವಿಶ್ವವಿದ್ಯಾಲಯದಲ್ಲಿ ಬೋಧಕರ ಅಗತ್ಯಬಿದ್ದ ಕೂಡಲೇ ಇಲಾಖೆಯನ್ನು ಸಂರ್ಪಸಿದರೆ 1:10 ರಂತೆ ಪಟ್ಟಿ ನೀಡಲಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಖಾಸಗಿ ಸಂಸ್ಥೆಗಳು ಸಹ ಇದರ ಸೌಲಭ್ಯವನ್ನು ಪಡೆಯಲು ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಗೋಲ್ಮಾಲ್​ಗಳಿಗೆ ಬ್ರೇಕ್ ಬೀಳಲಿದೆ.

ಸಿಂಡಿಕೇಟ್ ಸದಸ್ಯರಿಗೆ ಕೊಕ್: ವಿವಿಗಳಲ್ಲಿ ವಿಚಾರಣಾ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರು ಅಧ್ಯಕ್ಷ ಅಥವಾ ಸದಸ್ಯ ರಾಗುವುದನ್ನು ತೆಗೆದು ಹಾಕಲಾಗುತ್ತಿದೆ. ವಿಚಾರಣಾ ಸಮಿತಿಗಳಲ್ಲಿ ಇರುವವರೇ ಮುಂದೆ ಸಿಂಡಿಕೇಟ್ ಸಭೆಗಳಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದು ನೈಸರ್ಗಿಕ ನ್ಯಾಯಕ್ಕೆ ವಿರೋಧವಾಗಿರುತ್ತದೆ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಈಗಾಗಲೇ ವಿರೋಧ ಸಹ ಕೇಳಿ ಬರಲಾರಂಭಿಸಿದೆ.

ಅಭಿವೃದ್ಧಿ ಯೋಜನೆ: ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಪ್ರತಿ ವರ್ಷ ಸಂಸ್ಥೆಯ ಅಭಿವೃದ್ಧಿ ಯೋಜನೆ (ಐಡಿಪಿ) ಸಲ್ಲಿಸುವುದು ಕಡ್ಡಾಯ ಮಾಡಲಾಗುತ್ತಿದೆ. ಯಾವ ಸಂಸ್ಥೆ ಯೋಜನೆ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸುವುದೋ ಅದಕ್ಕೆ ವಾರ್ಷಿಕ ಪ್ರಶಸ್ತಿಯನ್ನು ವಿವಿಧ ವಿಷಯಗಳಲ್ಲಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ.

ಆನ್​ಲೈನ್: ಮುಂದಿನ ದಿನಗಳಲ್ಲಿ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ಸಭೆಗಳನ್ನು ಆನ್​ಲೈನ್​ನಲ್ಲಿಯೇ ನಡೆಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಇದರಿಂದ ಸಾಕಷ್ಟು ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಬಡ್ತಿ ನೀಡಿಕೆ: ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿಗೆ ಹದಿನೈದು ವರ್ಷಗಳಿಂದ ಬಡ್ತಿ ನೀಡಿಲ್ಲ. ಉನ್ನತ ಶಿಕ್ಷಣ ಇಲಾಖೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಈ ವ್ಯವಸ್ಥೆ ಸರಿಪಡಿಸಿ ಬಡ್ತಿ ನೀಡುವ ಮೂಲಕ ನ್ಯಾಯ ಒದಗಿಸಲು ಇಲಾಖೆ ಕಾರ್ಯೋನ್ಮುಖವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ತರುವಲ್ಲಿ ಮುಂದಿದ್ದೇವೆ. ಪಾರದರ್ಶಕ ಹಾಗೂ ಗುಣಮಟ್ಟದ ಶಿಕ್ಷಣವನ್ನು ಕೊಡುವುದು ನಮ್ಮ ಮುಂದಿರುವ ದೊಡ್ಡ ಜವಾಬ್ದಾರಿಯಾಗಿದೆ. ಉನ್ನತ ಶಿಕ್ಷಣ ದುಬಾರಿಯಾಗದೆ ಎಲ್ಲರಿಗೂ ಲಭ್ಯವಾಗಬೇಕಾಗಿದೆ. ಅದಕ್ಕಾಗಿಯೇ ಕೆಲವೊಂದು ಸುಧಾರಣೆಗಳನ್ನು ಮುಂದಿನ ವರ್ಷದಿಂದಲೇ ಜಾರಿಗೆ ತರಲು ಕಾರ್ಯೋನ್ಮುಖವಾಗಿದ್ದೇವೆ. | ಡಾ. ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ

ಸಮಿತಿ ರಚನೆ: ವಿಶ್ವವಿದ್ಯಾಲಯಗಳಲ್ಲಿ ಏಕರೂಪ ವ್ಯವಸ್ಥೆ ತರಲು ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಎರಡು ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಸಮಿತಿಯು ಶುಲ್ಕವನ್ನು ಎರಡು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಲು ಪ್ರಮಾಣ ನಿಗದಿ ಮಾಡಬೇಕು. ಮೌಲ್ಯಮಾಪನಕ್ಕೆ ಗೈರು ಆದರೆ ದಂಡದ ಪ್ರಮಾಣ ನಿಗದಿ ಮಾಡಬೇಕು. ಮೌಲ್ಯಮಾಪನ ಸಂಭಾವನೆ ಎಷ್ಟಿರಬೇಕು ಎಂಬುದನ್ನು ಗುರುತಿಸಬೇಕು. ವಿಶ್ವವಿದ್ಯಾಲಯಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಶುಲ್ಕ ನಿಗದಿ ಮಾಡಬೇಕಾಗಿದೆ.

ಒಂದೇ ಮಾದರಿ ಶುಲ್ಕ ಏಕೆ?: ಕೆಲವು ವಿಶ್ವವಿದ್ಯಾಲಯಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವುದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಕೆಲವು ವಿವಿಗಳಲ್ಲಿ ಬೋಧನಾ ಶುಲ್ಕಕ್ಕಿಂತ ಪರೀಕ್ಷಾ ಶುಲ್ಕ ಹೆಚ್ಚಾಗಿದೆ. ಮನಸ್ಸಿಗೆ ಬಂದಂತೆ ಪರಿಷ್ಕರಣೆ ಮಾಡಲಾಗುತ್ತಿದೆ. ಆದ್ದರಿಂದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಒಂದೇ ಮಾದರಿ ಶುಲ್ಕ ಇರುವಂತೆ ನೋಡಲಾಗುತ್ತದೆ.

ಡ್ಯಾಷ್​ಬೋರ್ಡ್: ಉನ್ನತ ಶಿಕ್ಷಣಕ್ಕೆ ಸಂಬಂಧಿ ಸಿದಂತೆ ಡ್ಯಾಷ್ ಬೋರ್ಡ್ ರೂಪುಗೊಳ್ಳುತ್ತಿದೆ. ವಿದ್ಯಾರ್ಥಿಗಳ ವಿವರಗಳಿಂದ ಹಿಡಿದು ಪ್ರತಿಯೊಂದು ಮಾಹಿತಿಯೂ ಈ ಡ್ಯಾಶ್ ಬೋರ್ಡ್​ನಲ್ಲಿ ಲಭ್ಯವಾಗಲಿದೆ. ಕೆಲವೊಂದು ಸೌಲಭ್ಯಗಳನ್ನು ಸಹ ಇದರಲ್ಲಿ ನೀಡಲಾಗುತ್ತದೆ. ಒಟ್ಟಾರೆ ಇಡೀ ವ್ಯವಸ್ಥೆ ಇಂದಿನ ಅಗತ್ಯಕ್ಕೆ ತಕ್ಕಂತೆ ಡಿಜಿಟಲೀಕರಣವಾಗಲಿದೆ.

ಇ-ಕಚೇರಿ: ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಇ-ಆಫೀಸ್ ವ್ಯವಸ್ಥೆ ತರುವ ಮೂಲಕ ಕಾಗದ ರಹಿತ ಕಚೇರಿಗಳಾಗಿ ಮಾಡಲಾಗುತ್ತಿದೆ. ಇದರೊಂದಿಗೆ ಕಡತ ವಿಲೇವಾರಿ 6 ಹಂತಗಳಿಗೂ ಹೆಚ್ಚಿದ್ದು ಅದನ್ನು 4 ಹಂತಕ್ಕೆ ಇಳಿಸಲಾಗುತ್ತದೆ.

ಪರೀಕ್ಷೆ ವ್ಯವಸ್ಥೆ ಸುಧಾರಣೆ: ಒಂದೊಂದು ವಿವಿಯಲ್ಲಿ ಪರೀಕ್ಷೆ ಹಾಗೂ ಫಲಿತಾಂಶ ಗಳ ಪ್ರಕಟ ವೇಳೆಯಲ್ಲಿ ವ್ಯತ್ಯಾಸಗಳಿವೆ. ವಿದ್ಯಾರ್ಥಿಗಳು ಒಂದೆಡೆಯಿಂದ ಇನ್ನೊಂದು ಕಡೆಗೆ ಹೋಗಲು ಸಮಸ್ಯೆ ಯಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಪರೀಕ್ಷೆ, ಫಲಿತಾಂಶ ಪ್ರಕಟಕ್ಕೆ ವೇಳಾಪಟ್ಟಿ ಪ್ರಕಟಿಸಲಾಗುತ್ತಿದೆ.