ನ್ಯೂಸ್

ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್​ ಕುಮಾರ್​ ನೇಮಕ: ಮೇ 15ಕ್ಕೆ ಅಧಿಕಾರ ಸ್ವೀಕಾರ

ನವದೆಹಲಿ: ಚುನಾವಣಾ ಆಯುಕ್ತ ರಾಜೀವ್​ ಕುಮಾರ್ ಅವರನ್ನು ದೇಶದ ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿಇಸಿ) ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಮೇ 14ರಂದು ಹಾಲಿ ಸಿಇಸಿ ಸುಶೀಲ್​ ಚಂದ್ರ ಅವರ ಅಧಿಕಾರಾವಧಿ ಮುಗಿಯಲಿದ್ದು, 15ರಂದು ಅಂದರೆ ಭಾನುವಾರ ಸಿಇಸಿ ಆಗಿ ರಾಜೀವ್​ ಕುಮಾರ್​ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ನೂತನ ಸಿಇಸಿ ನೇಮಕ ಅಧಿಸೂಚನೆಯ ಪ್ರತಿಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು, ಮುಂದಿನ ಸಿಇಸಿ ರಾಜೀವ್​ ಕುಮಾರ್ ಎಂದು ಘೋಷಿಸಿದ್ದಾರೆ.

1984ರ ಬ್ಯಾಚ್​ನ ಐಎಎಸ್​ ಅಧಿಕಾರಿಯಾಗಿರುವ ರಾಜೀವ್​ ಕುಮಾರ್​, ಜಾರ್ಖಂಡ್​ ಮತ್ತು ಬಿಹಾರ ಕೇಡರ್​ನ ಹಿರಿಯ ಅಧಿಕಾರಿ. 36 ವರ್ಷ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ರಾಜೀವ್​ ಅವರು 2020ರ ಫೆಬ್ರವರಿಯಲ್ಲಿ ನಿವೃತ್ತರಾದರು. ಅದೇ ವರ್ಷ ಅಂದರೆ 2020ರ ಸೆಪ್ಟೆಂಬರ್​ 1ರಂದು ಚುನಾವಣಾ ಆಯುಕ್ತರಲ್ಲಿ ಒಬ್ಬರಾಗಿ ಅಧಿಕಾರ ಸ್ವೀಕರಿಸಿದ್ದರು. ಚುನಾವಣಾ ಆಯುಕ್ತರಲ್ಲಿ ಅತಿ ಹಿರಿಯರಾಗಿರುವ ಐಎಎಸ್​ ಅಧಿಕಾರಿ ರಾಜೀವ್​ ಅವರಿಗೆ ಇದೀಗ ಸಿಇಸಿ ಸ್ಥಾನ ಒಲಿದಿದೆ.