ಬಾಗಲಕೋಟೆ: 2021ನೇ ಸಾಲಿನ ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಡಿಎಂ ಗ್ಯಾಸೋಯೆಂಟರಾಲಜಿ(ಡೈಜೆಸ್ಟಿವ್ ಸಿಸ್ಟಂ) ಮತ್ತು ಡಿಎಂ ಹೆಪಟಾಲಜಿ(ಲಿವರ್ ಸ್ಪೆಷಲಿಸ್ಟ್) ಎರಡೂ ವಿಭಾಗದಲ್ಲಿ ಮುಧೋಳ ಮೂಲದ ಡಾ.ಚಿದಾನಂದ ಕುಂಬಾರ ಮೊದಲ ರ‌್ಯಾಂಕ್ ಪಡೆದಿದ್ದಾರೆ.
ಕಲ್ಲಪ್ಪ ಕುಂಬಾರ ಮತ್ತು ಕಸ್ತೂರಿ ದಂಪತಿಯ ಪುತ್ರ ಡಾ. ಚಿದಾನಂದ ಕುಂಬಾರ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಡಾ.ಚಿದಾನಂದ ಅವರನ್ನ ತಂದೆ ಕಷ್ಟಪಟ್ಟು ಬೆಳೆಸಿದರು. ಬಡತನದಲ್ಲೂ ಮಗನ ವಿದ್ಯಾಭ್ಯಾಸಕ್ಕೆ ನೆರವಾದರು.
ರನ್ನಬೆಳಗಲಿಯ ಸರ್ಕಾರಿ ಎಂಪಿಎಸ್ ಶಾಲೆಯಲ್ಲಿ 1ರಿಂದ7ನೇ ತರಗತಿ, ಬಿವಿವಿಎಸ್ ಪ್ರೌಢಶಾಲೆಯಲ್ಲಿ 8-10ನೇ ತರಗತಿ, ಜಮಖಂಡಿಯ ಬಿಎಲ್ಡಿಇ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಂಬಿಬಿಎಸ್ ಮುಗಿಸಿ, ಒಂದು ವರ್ಷದ ಹಿಂದೆ ದೆಹಲಿ ಏಮ್ಸ್ನಲ್ಲಿ ಎಂಡಿ ಮುಗಿಸಿದ್ದಾರೆ. ಸದ್ಯ ಹೈದರಾಬಾದ್ನ ಗ್ಲೋಬಲ್ ಆಸ್ಪತ್ರೆಯಲ್ಲಿ ಕೆಸಲ ಮಾಡುತ್ತಿರುವ ಚಿದಾನಂದ, 2021ನೇ ಸಾಲಿನ ಸೂಪರ್ ಸ್ಪೆಷಾಲಿಟಿ ವಿಭಾಗದ ನೀಟ್ ಪರೀಕ್ಷೆ ಬರೆದಿದ್ದರು. ಕಳೆದ ಜನವರಿ 31ರಂದು ಫಲಿತಾಂಶ ಪ್ರಕಟಗೊಂಡಿದ್ದು, 759 ಅಂಕಗಳಿಸಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದೇಶಾದ್ಯಂತ 20 ಸಾವಿರ ಮಂದಿ ಈ ಪರೀಕ್ಷೆ ಬರೆದಿದ್ದರು.
ಡಾ.ಚಿದಾನಂದ ಕುಂಬಾರ ಅವರು ಮೊದಲ ರ‌್ಯಾಂಕ್ ಪಡೆದ ವಿಚಾರ ತಿಳಿದು ಮುಧೋಳ ಶಾಸಕರೂ ಆದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.