ನ್ಯೂಸ್

ಮೈಸೂರಲ್ಲಿ 'ಕವಲಂದೆ ಮಿನಿ ಪಾಕಿಸ್ತಾನ' ಎಂದು ಘೋಷಣೆ ಕೂಗಿದ್ದ ಆರೋಪಿಗಳ ಬಂಧನ

ಮೈಸೂರು: ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ರಂಜಾನ್​ ಹಬ್ಬದ ವೇಳೆ 'ಕವಲಂದೆ ಮಿನಿ ಪಾಕಿಸ್ತಾನ' ಎಂದು ಘೋಷಣೆ ಕೂಗಿದ್ದ ಆರೋಪಿಗಳಿಬ್ಬರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಫಯಾಜ್ ಶರೀಫ್, ಹನನ್ ಆಲಿ ಖಾನ್ ಬಂಧಿತರು. ಇವರಿಬ್ಬರೂ ಗ್ರಾಮದಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದವರು. ಒಬ್ಬನ ವಿದ್ಯಾಭ್ಯಾಸ ಎಸ್ಸೆಸ್ಸೆಸ್ಸೆ ಅಪೂರ್ಣ. ಮತ್ತೊಬ್ಬ ಐಟಿಐ ಫೇಲ್‌.

ರಂಜಾನ್ ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಹೊರಟಿದ್ದ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಯೊಬ್ಬ "ಕವಲಂದೆ ಮಿನಿ ಪಾಕಿಸ್ತಾನ'' ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ದೊಡ್ಡಕವಲಂದೆ ಗ್ರಾಮದಲ್ಲಿ ಮುಸ್ಲಿಮರಿಗಿಂತ ಹಿಂದುಗಳ ಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗ ಮಿನಿ ಪಾಕಿಸ್ತಾನ ಎಂದು ಹೇಳಿರುವುದು ಮುಸ್ಲಿಮರ ವಿಕೃತ ಮನಸ್ಥಿತಿಯನ್ನು ತೋರುತ್ತಿದೆ. ಅವರಿಗೆ ಭಾರತ ದೇಶದ ಬಗ್ಗೆ ಕಿಂಚಿತ್ತೂ ಅಭಿಮಾನ ಇಲ್ಲದಿರುವುದು ಅವರ ಮಾತಿನಿಂದ ಸ್ಪಷ್ಟವಾಗಿದೆ. ಈ ರೀತಿ ಹೇಳಿಕೆ ನೀಡಿ ವಿಡಿಯೋ ಮಾಡಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಿ ದೇಶದ್ರೋಹ ಕೇಸ್​ ದಾಖಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದುಪರ ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದರು. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.