ಸಾಂದರ್ಭಿಕ ಚಿತ್ರ 
ನ್ಯೂಸ್

ಮೈಸೂರು ದಸರಾ| ರತ್ನಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಿದ ಯದುವೀರ್ ಒಡೆಯರ್

ಮೈಸೂರು: ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಖಾಸಗಿ ದರ್ಬಾರ್​ ಅರಮನೆಯಲ್ಲಿ ಆರಂಭವಾಗಿದ್ದು, ಮೊದಲ ದಿನದ ದರ್ಬಾರ್​ ವೈಭವೋಪೇತವಾಗಿ ನಡೆಯಿತು.

ಸೆ.26ರಿಂದ 9 ದಿನಗಳವರೆಗೆ ಅರಮನೆಯಲ್ಲಿ ಖಾಸಗಿ ದರ್ಬಾರ್​ ನಡೆಯಲಿದ್ದು, ಸೋಮವಾರ ಅರಮನೆಯ ದರ್ಬಾರ್ ಹಾಲ್​ನಲ್ಲಿ ರತ್ನಖಚಿತ ಸಿಂಹಾಸನವೇರಿದ 7ನೇ ಬಾರಿ ಖಾಸಗಿ ದರ್ಬಾರ್ ನಡೆಸಿದ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ರಾಜಮನೆತನದ ಪಟ್ಟದ ಕತ್ತಿಯೊಂದಿಗೆ ಸಾಂಪ್ರದಾಯಿಕ ರಾಜ ಪೋಷಾಕಿನಲ್ಲಿ‌ ನವರಾತ್ರಿ ದರ್ಬಾರ್ ನಡೆಸಿದರು. ರಾಜಮಾತೆ ಪ್ರಮೋದಾದೇವಿ ಒಡೆಯರ್, ರಾಜಕುಮಾರಿ ತ್ರಿಷಿಕಾ ಹಾಜರಿದ್ದರು.

ಮುತ್ತಿನ ಮಣಿಯ ವಿನ್ಯಾಸವುಳ್ಳ, ತಿಳಿ ನೀಲಿ ವರ್ಣದ ಮೈಸೂರು ಪೇಟ, ರೇಷ್ಮೆ ಖುರ್ತಾ-ಪೈಜಾಮ-ಶಲ್ಯ ಧರಿಸಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​, ರಾಜಲಾಂಛನ ಗಂಡಬೇರುಡ ಒಳಗೊಂಡ ರತ್ನಖಚಿತ ಸರ, ಪರಂಪರಗತವಾದ ಆಭರಣಗಳಿಂದ ಕಂಗೊಳಿಸುತ್ತಿದ್ದರು. ಮಧ್ಯಾಹ್ನ 12.15ರಿಂದ ಆರಂಭವಾದ ಖಾಸಗಿ ದರ್ಬಾರ್, 45 ನಿಮಿಷಗಳಲ್ಲಿ ಮುಕ್ತಾಯವಾಯಿತು.

ಖಾಸಗಿ ದರ್ಬಾರ್ ಹಿನ್ನೆಲೆ ಮುಂಜಾನೆಯಿಂದಲೇ ಹಲವು ಪೂಜಾ ಕೈಕರ್ಯಗಳು ನಡೆದವು. ಬೆಳಗ್ಗೆ 6 ಗಂಟೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆ ಸ್ನಾನ ನಡೆಯಿತು. ಬೆಳಗ್ಗೆ 9ರಿಂದ 9.46ರ ವೃಶ್ಚಿಕ ಲಗ್ನದಲ್ಲಿ ಕಂಕಣ ಧಾರಣೆ ಮಾಡಲಾಯಿತು. ಕಂಕಣ ಧರಿಸಿದ ಯದುವೀರ ಅವರು ಮನೆ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಕಳಸ ಪೂಜೆ ನಡೆಯಿತು. ಮಧ್ಯಾಹ್ನ 12ರಿಂದ 12.15ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಸಿಂಹಾಸನರೂಢರಾದರು.

ಖಾಸಗಿ ದರ್ಬಾರ್ ಆರಂಭವಾಗುತ್ತಿದ್ದಂತೆ ಕೋಡಿ ಸೋಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ಸಂಪ್ರದಾಯದಂತೆ ಮಂಗಳವಾದ್ಯ, ಕಳಸ ಹೊತ್ತ ಸುಮಂಗಲಿಯರೊಂದಿಗೆ ಅರಮನೆಯಿಂದ ದೇವಾಲಯಕ್ಕೆ ಹೊರಟ ಪಟ್ಟದ ಆನೆ, ಕುದುರೆ, ಒಂಟೆ, ಹಸುಗಳು ಕೋಡಿ ಸೋಮೇಶ್ವರ ದೇಗುಲದಲ್ಲಿ ಕಳಸ ಪೂಜೆ ಬಳಿಕ ಅರಮನೆಗೆ ವಾಪಸ್ ಆದವು.

ಖಾಸಗಿ ದರ್ಬಾರ್ ಹಿನ್ನೆಲೆ ಮಧ್ಯಾಹ್ನ 1.30ರವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ದಸರಾ ಮುಗಿದ ಬಳಿಕವೂ ಕೆಲ ದಿನಗಳು ಸಾರ್ವಜನಿಕ ವೀಕ್ಷಣೆಗೆ ರತ್ನಖಚಿತ ಸಿಂಹಾಸನ ದರ್ಬಾರ್​ ಹಾಲ್​ನಲ್ಲಿ ಇರಲಿದ್ದು, ಅ.20ರಂದು ತೆರವು ಮಾಡಲಾಗುತ್ತದೆ.