ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹಣೆ ಗುರಿ ಮುಟ್ಟಲು ರಾಜ್ಯದ ಮಹಾನಗರ ಪಾಲಿಕೆಗಳು ವಿಫಲವಾಗಿವೆ. ಆಸ್ತಿ ತೆರಿಗೆ ಸಂಗ್ರಹಕ್ಕೆ ರಾಜ್ಯದಲ್ಲಿ ನಿರ್ದಿಷ್ಟ ನಿಯಮಗಳು ಇಲ್ಲದೆ, ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಸಾವಿರಾರು ಕೋಟಿ ರೂ. ಸೋರಿಕೆಯಾಗುತ್ತಿದೆ.
ಮೂರು ವರ್ಷಗಳಿಂದ ಬಳ್ಳಾರಿ, ಬೆಳಗಾವಿ, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ ಮಹಾನಗರ ಪಾಲಿಕೆಗಳು ಆಸ್ತಿ ತೆರಿಗೆ ವಸೂಲಾತಿಯಲ್ಲಿ ಹಿಂದುಳಿದಿವೆ. ಅಲ್ಲದೆ, ರಾಜ್ಯದಲ್ಲಿ ಹಲವೆಡೆ ವಸೂಲಿಯಾದ ತೆರಿಗೆ ಕುರಿತು ಮಾಹಿತಿಯನ್ನು ಸ್ಥಳೀಯ ಸಂಸ್ಥೆಗಳು ನೋಂದಣಿಯಲ್ಲಿ ದಾಖಲಿಸುತ್ತಿಲ್ಲ. ಗ್ರಾಹಕರಿಗೆ ಬೋಗಸ್ ಬಿಲ್ ನೀಡಿ ವಂಚಿಸುತ್ತಿವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂ.ತೆರಿಗೆ ಸಂಗ್ರಹವಾಗುತ್ತಿದ್ದರೂ ಹತ್ತಾರು ಕೋಟಿ ರೂ.ಮಾತ್ರ ಸರ್ಕಾರಕ್ಕೆ ಲೆಕ್ಕ ತೋರಿಸಿ ಉಳಿದ ಹಣವನ್ನು ಅಧಿಕಾರಿಗಳು ಲಪಟಾಯಿಸುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಬೇಕಿದ್ದ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಹಣ ಅನ್ಯರ ಪಾಲಾಗುತ್ತಿದೆ.
2018-19ರಿಂದ 2020-21ರವರೆಗೆ ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ಒಟ್ಟು 451 ಕೋಟಿ ರೂ.ಅನ್ನು ಈ ಎಲ್ಲ ಪಾಲಿಕೆಗಳು ಬಾಕಿ ಉಳಿಸಿಕೊಂಡಿವೆ. ಸರ್ಕಾರ 2018-19ರಲ್ಲಿ ಈ ಎಲ್ಲ ಪಾಲಿಕೆಗಳಿಗೆ ಒಟ್ಟು 540 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹಣೆ ಗುರಿ ನೀಡಿತ್ತು. ಇದರಲ್ಲಿ 390 ಕೋಟಿ ರೂ. ಸಂಗ್ರಹವಾಗಿದೆ. 2019-20ರಲ್ಲಿ ಒಟ್ಟು ಗುರಿಯ 529 ಕೋಟಿ ರೂ. ಪೈಕಿ 399 ಕೋಟಿ ರೂ. ಹಾಗೂ 2020-21ರಲ್ಲಿ ಒಟ್ಟು 614 ಕೋಟಿ ರೂ. ಪೈಕಿ 441 ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹಿಸಲು ಶಕ್ತವಾಗಿವೆ. ಆದರೆ, ಶೇ.100 ಆಸ್ತಿ ತೆರಿಗೆ ಸಂಗ್ರಹಿಸಲು ಪಾಲಿಕೆಗಳು ವಿಫಲವಾಗಿವೆ.
2018-19ರಿಂದ 2020-21ರವರೆಗೆ ಎಲ್ಲ ಪಾಲಿಕೆಗಳಗಿಂತ ಮೈಸೂರು ಪಾಲಿಕೆ ಅತಿ ಹೆಚ್ಚು 226 ಕೋಟಿ ರೂ. ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಮಂಗಳೂರು ಪಾಲಿಕೆ 70 ಕೋಟಿ ರೂ., ಹುಬ್ಬಳ್ಳಿ-ಧಾರವಾಡ ಪಾಲಿಕೆ 57 ಕೋಟಿ ರೂ., ಕಲಬುರಗಿ ಪಾಲಿಕೆ 53 ಕೋಟಿ ರೂ., ಬೆಳಗಾವಿ ಪಾಲಿಕೆ 30 ಕೋಟಿ ರೂ., ದಾವಣಗೆರೆ ಪಾಲಿಕೆ 13 ಕೋಟಿ ರೂ., ಬಳ್ಳಾರಿ ಪಾಲಿಕೆ 11 ಕೋಟಿ ರೂ., ತುಮಕೂರು ಪಾಲಿಕೆ 11 ಕೋಟಿ ರೂ., ಶಿವಮೊಗ್ಗ ಪಾಲಿಕೆ 2.5 ಕೋಟಿ ರೂ. ಹಾಗೂ ವಿಜಯಪುರ ಪಾಲಿಕೆ 3 ಕೋಟಿ ರೂ. ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ.
ನಿರ್ದಿಷ್ಟ ನಿಯಮಗಳಿಲ್ಲ: ಆಸ್ತಿ ತೆರಿಗೆ ಸಂಗ್ರಹಕ್ಕೆ ರಾಜ್ಯದಲ್ಲಿ ನಿರ್ದಿಷ್ಟ ನಿಯಮಗಳು ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಸಾವಿರಾರು ಕೋಟಿ ರೂ. ಬೇರೆ ಬೇರೆ ರೂಪದಲ್ಲಿ ಸೋರಿಕೆಯಾಗುತ್ತಿದೆ. ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಂದ ವಸೂಲಿ ಮಾಡಲಾಗಿದ್ದ ತೆರಿಗೆಯನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಪಾಲಿಕೆಗಳ ಕೆಲ ಭಷ್ಟ್ರ ಅಧಿಕಾರಿಗಳು ಸರ್ಕಾರಕ್ಕೆ ಪಾವತಿಸದೆ ಅಕ್ರಮವಾಗಿ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ತೆರಿಗೆ ವಸೂಲಿಗೆ ಸಮರ್ಪಕ ಕೋಷ್ಠಕ ಇಲ್ಲದಿರುವ ಹಿನ್ನೆಲೆಯಲ್ಲಿ ನಗರ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಭ್ರಷ್ಟಾಚಾರ ತಾಂಡವಾಡುತ್ತಿದೆ. ರಾಜ್ಯ ಮೌಲ್ಯಮಾಪನ ಸಮಿತಿ ಕರ್ನಾಟಕ ಸ್ಟಾಂಪ್‌ಗಳ ಅಧಿನಿಯಮ 45(ಬಿ) ಅಡಿಯಲ್ಲಿ ಪೌರಾಡಳಿತ ಇಲಾಖೆ ತೆರಿಗೆ ದರ ನಿಗದಿಪಡಿಸುತ್ತದೆ. ಆದರೆ, ಸ್ಥಳೀಯ ಸಂಸ್ಥೆಗಳೇ ಅವೈಜ್ಞಾನಿಕವಾಗಿ ಸ್ವತ್ತಿನ ಮೌಲ್ಯ ನಿರ್ಧರಿಸಿ ತೆರಿಗೆ ವಸೂಲಿಗೆ ಮಾಡುತ್ತಿವೆ.
ನೋಂದಣಿಯಲ್ಲಿ ದಾಖಲಿಸುತ್ತಿಲ್ಲ: ಸಂಗ್ರಹಿಸುವ ಆಸ್ತಿ ತೆರಿಗೆಯನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂಬ ನಿಯಮವಿದೆ. ಅದರಂತೆ, ಸ್ಥಳೀಯ ಸಂಸ್ಥೆಗಳಾದ ನಗರ ಮತ್ತು ಮಹಾನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಿಂದ ಪ್ರತಿ ಆರ್ಥಿಕ ವರ್ಷದಲ್ಲಿ ಆಸ್ತಿ ಹಕ್ಕುದಾರರಿಂದ ಆಸ್ತಿ ತೆರಿಗೆ ವಸೂಲಿ ಮಾಡುತ್ತವೆ. ಈ ಹಣವನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಿಕೊಳ್ಳಲು ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯೋಜನೆಗಳನ್ನು ರೂಪಿಸಬೇಕು. ಈ ಕಾರ್ಯವೂ ಆಗುತ್ತಿಲ್ಲ.
ಆನ್‌ಲೈನ್ ವ್ಯವಸ್ಥೆ ಬರಲಿ: ಜಿಎಸ್‌ಟಿ, ವಿದ್ಯುತ್, ನೀರು ಸೇರಿ ಇತರೆ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಲಾಗುತ್ತಿದೆ. ಆದರೆ, ಆಸ್ತಿ ತೆರಿಗೆ ಪಾವತಿಗೆ ಈ ವ್ಯವಸ್ಥೆಯನ್ನು ಅಳವಡಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ. ಹಾಗಾಗಿ, ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬೇಕೆಂದು ತಜ್ಞರು ಈಗಾಗಲೇ ಸಲಹೆ ನೀಡಿದ್ದು, ಕೆಲವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ.