ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿರುವ ಪಾಸ್ ಪೋರ್ಟ್ ಕೇಂದ್ರ.
ಕಿರುವಾರ ಎಸ್. ಸುದರ್ಶನ್ ಕೋಲಾರ
ಇತ್ತೀಚಿನ ದಿನಗಳಲ್ಲಿ ಸೇವೆ ಪಡೆಯಲು ಪಾಸ್ಪೋರ್ಟ್ ಪ್ರಮುಖ ದಾಖಲೆಯನ್ನಾಗಿ ಪರಿಗಣಿಸುತ್ತಿದ್ದು, ಹೊಸದಾಗಿ ಪಾಸ್ಪೋರ್ಟ್ ಪಡೆಯಲು ಪರದಾಟ ಶುರುವಾಗಿದೆ.
ವಿದೇಶಿ ಪ್ರವಾಸ ಕೈಗೊಳ್ಳಲು ಅವಶ್ಯಕವಾಗಿರುವ ಪಾಸ್ಪೋರ್ಟ್, ಆಧಾರ್ ಕಾರ್ಡ್ನಷ್ಟೇ ಮುಖ್ಯ ಗುರುತಿನ ಚೀಟಿಯಾಗಿದ್ದು, ವಿದೇಶಿ ಪ್ರವಾಸಕ್ಕೆ ಹೋಗುವ ಜಿಲ್ಲೆಯ ಜನಕ್ಕೆ ಸುಲಭವಾಗಿ ಪಾಸ್ಪೋರ್ಟ್ ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು 2019 ಫೆ 5ರಂದು ಜಿಲ್ಲೆಯ ಕೆಜಿಎ್ ನಗರದ ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಿಸಿತ್ತು. ಆದರೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಕೇಂದ್ರದಲ್ಲಿ ತೆರೆದಿರುವುದು ಗಡಿ ಗ್ರಾಮಗಳ ಜನತೆಗೆ ಅನನುಕೂಲವಾಗಿದೆ.
ಪಾಸ್ಪೋರ್ಟ್ ಸೇವಾ ಕೇಂದ್ರಗಳ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್ಪೋರ್ಟ್ ವಿತರಿಸುತ್ತಿತ್ತು. ಇದೀಗ ಅಂಚೆ ಕಚೇರಿ ಮೂಲಕವೂ ಪಾಸ್ಪೋರ್ಟ್ ಪಡೆಯುವ ಅವಕಾಶ ಕಲ್ಪಿಸಿದ್ದು, ನಾಗರಿಕರಿಗೆ ಸುಲಭವಾಗಿ ದಾಖಲೆ ಲಭ್ಯವಾಗುತ್ತದೆ ಎಂಬ ನಿರೀೆಯಿತ್ತು. ಆದರೆ ಪಾಸ್ಪೋರ್ಟ್ ನೋಂದಣಿ ಮಾಡಿಸುವುದು, ದಾಖಲೆ ಪಡೆದುಕೊಳ್ಳುವುದು, ನವೀಕರಣ ಮಾಡಿಸುವುದು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿದೆ.
ಅಂಚೆ ಕಚೇರಿಯ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಾಸ್ಪೋರ್ಟ್ ಪಡೆಯಬಹುದು. ದೇಶಾದ್ಯಂತ 424 ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಾಪಿಸಲಾಗಿದ್ದು, ಆ ಪೈಕಿ ರಾಜ್ಯದಲ್ಲಿ 24 ಜಿಲ್ಲಾ ಕೇಂದ್ರಗಳಲ್ಲಿ ಪಾಸ್ಪೋರ್ಟ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ಕೋಲಾರ ಜಿಲ್ಲೆಯಲ್ಲಿ ಕೆಜಿಎಫ್ ನಗರದ ಆಂಚೆ ಕಚೇರಿಯಲ್ಲಿ ಮಾತ್ರ ಪಾಸ್ಪೋರ್ಟ್ ಸೇವೆ ನೀಡಲಾಗುತ್ತಿದೆ. ಆದರೆ ಸಮರ್ಪಕವಾಗಿ ಸೇವೆ ದೊರೆಯದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
- ಜಿಲ್ಲಾಕೇಂದ್ರಕ್ಕೆ ಸ್ಥಳಾಂತರಿಸಲು ಒತ್ತಾಯ
ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರದಲ್ಲೇ ಪಾಸ್ಪೋರ್ಟ್ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ತಾಲೂಕು, ಗ್ರಾಮಗಳಿಂದ ಕೇಂದ್ರಕ್ಕೆ ಬಂದು ಸೇವೆ ಪಡೆಯುವುದು ಸುಲಭವಾಗುತ್ತದೆ. ಆದರೆ ಜಿಲ್ಲಾ ಕೇಂದ್ರ ಬಿಟ್ಟು, ಕೆಜಿಎ್ನಲ್ಲಿ ಇರುವುದರಿಂದ ಶ್ರೀನಿವಾಸಪುರ, ಕೋಲಾರ ತಾಲೂಕಿನ ಜನಕ್ಕೆ ತೊಂದರೆಯಾಗುತ್ತಿದೆ. ಆಂಧ್ರ ಗಡಿಯಿಂದ ತಮಿಳುನಾಡಿಗೆ ಹೋಗಿ ಬರುವಷ್ಟರಲ್ಲಿ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದಾಗಿ ಕೆಜಿಎಫ್ನಿಂದ ಕೋಲಾರ ಜಿಲ್ಲಾ ಕೇಂದ್ರಕ್ಕೆ ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಳಾಂತರ ಮಾಡಬೇಕು ಎಂದು ಹಲವರು ಒತ್ತಾಯಯಿಸಿದ್ದಾರೆ.
- ಶೇ.70ರಷ್ಟು ಪ್ರಗತಿ ಸಾಧನೆಯಿಲ್ಲ..?
ವಾಸಸ್ಥಳ ಪ್ರಮಾಣ ಪತ್ರ, ಹುಟ್ಟಿದ ದಿನಾಂಕ ಸೇರಿ ವಿವಿಧ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ನಂತರ ಅರ್ಜಿ ಪರಿಶೀಲನೆ ಬಳಿಕ ವಿವಿಧ ಪ್ರಕ್ರಿಯೆ ನಡೆದು 30 ದಿನದಲ್ಲಿ ಪಾಸ್ಪೋರ್ಟ್ ಕೈ ಸೇರಲಿದೆ. ಒಂದು ದಿನಕ್ಕೆ 40 ಪಾಸ್ಪೋರ್ಟ್ ಆಪ್ಲೋಡ್ ಮಾಡಲು ಅವಕಾಶವಿದೆ. ಆದರೆ ಕೆಜಿಎ್ನಲ್ಲಿ ಶೇ.70 ಪ್ರಗತಿ ಸಾಧನೆಯಾಗುತ್ತಿಲ್ಲ. ಪಾಸ್ಪೋರ್ಟ್ ಜತೆಗೆ ವೀಸಾ ಅಗತ್ಯ. ಪ್ರವಾಸ, ವ್ಯಾಪಾರ, ವಿದ್ಯಾಭ್ಯಾಸ, ಉದ್ಯೋಗ, ಸಮ್ಮೇಳನ ಸೇರಿ ಹಲವು ಕೆಲಸಗಳಿಗೆ ವೀಸಾ ಬೇಕು. ವಿದೇಶಕ್ಕೆ ಹೋಗಿ ಉಳಿದುಕೊಳ್ಳುವಷ್ಟು ದಿನಕ್ಕೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪಡೆದುಕೊಳ್ಳಬೇಕು.
- ಸಬೂಬು, ನೆಪ ಹೇಳುವುದು ವಾಡಿಕೆ
ಕೆಜಿಎ್ನಲ್ಲಿರುವ ಪಾಸ್ಪೋರ್ಟ್ ಕೇಂದ್ರದ ಸಿಬ್ಬಂದಿಯೇ ಅರ್ಜಿದಾರರಿಗೆ ಸಮಯ ಹಾಗೂ ಟೋಕನ್ ನೀಡಿ ಬರಲು ಹೇಳುತ್ತಾರೆ. ನಿಗದಿತ ಸಮಯಕ್ಕೆ ಹೋದರೂ ತಾಸುಗಟ್ಟಲೇ ಕಾಯಿಸಿ ಸತಾಯಿಸುತ್ತಾರೆ. ತಡ ಏಕೆ ಎಂದು ಪ್ರಶ್ನಿಸಿದರೆ ನಮಗೆ ಇರುವ ನಿಯಮವೇ ಹಾಗೆ ಎಂದು ಕೇಂದ್ರದಲ್ಲಿನ ನಿರ್ವಾಹಕ ಸಬೂಬು ಹೇಳುತ್ತಾರೆ. ಕೇಂದ್ರಕ್ಕೆ ಪ್ರತಿದಿನ 25 ರಿಂದ 30 ಮಂದಿ ಹೊಸ ಪಾಸ್ಪೋರ್ಟ್ ಹಾಗೂ ನವೀಕರಣಕ್ಕಾಗಿ ಆಗಮಿಸಿದರೂ ಯಾರಿಗೂ ಸಮಯಕ್ಕೆ ಸರಿಯಾಗಿ ಸೇವೆ ಸಿಗುತ್ತಿಲ್ಲ. ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಳ್ಳುತ್ತಾರೆ. ಇದರಿಂದಾಗಿ ಕಾರ್ಯ ಒತ್ತಡ ಹೆಚ್ಚಾಗುತ್ತದೆ. ಕಷ್ಟವನ್ನು ತಪ್ಪಿಸಿಕೊಳ್ಳಲು ಸರ್ವರ್, ಸಿಬ್ಬಂದಿ ಕೊರತೆ, ಕಂಪ್ಯೂಟರ್ ಸರಿಯಿಲ್ಲ ಎಂದು ನೆಪ ಹೇಳುವುದು ಸಾಮಾನ್ಯವಾಗಿದೆ.
ಕೋಟ್….
ಪಾಸ್ಪೋರ್ಟ್ ನವೀಕರಣಕ್ಕಾಗಿ ಕೆಜಿಎ್ನಲ್ಲಿರುವ ಸೇವಾ ಕೇಂದ್ರಕ್ಕೆ ಸಿಬ್ಬಂದಿ ಹೇಳಿದ ಸಮಯಕ್ಕೆ ಬೆಳಗ್ಗೆ 10.30ಕ್ಕೆ ಹೋಗಿದ್ದೆ, ಆದರೆ ಅಲ್ಲಿನ ಸಿಬ್ಬಂದಿ ನನಗೆ ದಾಖಲೆ ನೀಡಿದ್ದು ಮಧ್ಯಾಹ್ನ 1.45ಕ್ಕೆ. ತಡ ಯಾಕೆ ಮಾಡುತ್ತೀರ ಎಂದು ಕೇಳಿದರೆ ಸ್ಪಂದಿಸುವುದಿಲ್ಲ. ವಿನಾಕಾರಣ ಸಬೂಬು ಹೇಳುತ್ತಾರೆ.
- ಎನ್.ನಾಗರಾಜ್, ಪಾಸ್ಪೋರ್ಟ್ ಅರ್ಜಿದಾರ, ಕೋಲಾರ