ನ್ಯೂಸ್

ಹಿಜಾಬ್ ವಿವಾದದ ಹಿಂದೆ ಉಗ್ರಗಾಮಿ ಸಂಘಟನೆ ಕೈವಾಡ ಶಂಕೆ: ಆರ್​. ಅಶೋಕ್​

ಉಡುಪಿ: ಹಿಜಾಬ್ ವಿವಾದದ ಹಿಂದೆ ಉಗ್ರಗಾಮಿ ಸಂಘಟನೆಗಳ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಗ್ರಾಮವಾಸ್ತವ್ಯಕ್ಕೆಂದು ಬ್ರಹ್ಮವರ ತಾಲೂಕಿನ ಕೊಕ್ಕರ್ಣೆಗೆ ಶನಿವಾರ ಆಗಮಿಸಿದ ಸಚಿವರು ಸುದ್ದಿಗಾರರ ಜತೆ ಮಾತನಾಡಿದರು. ಹಿಜಾಬ್ ಪ್ರಕರಣ ಕುರಿತು ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಸೇರಿದಂತೆ ಮೊದಲಾದ ದೇಶಗಳು ಪ್ರತಿಕ್ರಿಯೆ ನೀಡಿರುವುದು ಹಾಗೂ ಒಂದು ವಾರದಲ್ಲಿ ಈ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿರುವುದನ್ನು ಗಮನಿಸಿದರೆ ಉಗ್ರಗಾಮಿ ಸಂಘಟನೆಗಳ ಕೈವಾಡ ಶಂಕೆ ವ್ಯಕ್ತವಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ಶಾಲೆಗೆ ಕಲಿಯಲು ಹೋಗುತ್ತಾರೆಯೇ ವಿನಃ ಧರ್ಮ ಪ್ರಚಾರ ಮಾಡಲು ಹೋಗೋದಿಲ್ಲ. ಶಾಲೆಗಳಲ್ಲಿ ವಿದ್ಯೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೇಸರಿ ಶಾಲು, ಹಿಜಾಬ್ ಎರಡಕ್ಕೂ ಆಸ್ಪದವಿಲ್ಲ. ಧರ್ಮಕ್ಕಿಂತ ದೇಶ ದೊಡ್ಡದು. ಎಲ್ಲರೂ ಅಂಬೇಡ್ಕರ್ ಅವರು ರಚಿಸಿದ ಕಾನೂನುಗಳನ್ನು ಪಾಲನೆ ಮಾಡಲೇಬೇಕು ಎಂದು ಅಶೋಕ್​ ತಿಳಿಸಿದರು.