ಸಂಪಾದಕೀಯ ಲೇಖನ 
ನ್ಯೂಸ್

ಸಂಪಾದಕೀಯ: ಆತಂಕದ ಸಂಗತಿ

ಮೋಹನ್​ ಶೆಟ್ಟಿ
ಶಿಶುಗಳಿಗೆ ತಾಯಿಯ ಎದೆಹಾಲೇ ಅಮೃತ, ಬೆಳವಣಿಗೆಗೆ ಪೂರಕ. ಆದರೆ, ಬಿಹಾರದ ಹಲವು ಜಿಲ್ಲೆಗಳಲ್ಲಿನ ಬಾಣಂತಿಯರ ಎದೆಹಾಲಿನಲ್ಲಿ ಯುರೇನಿಯಂ (ಯು238) ಪತ್ತೆಯಾಗಿದ್ದು, ಶಿಶುಗಳ ಆರೋಗ್ಯ ಕುರಿತು ಕಳವಳ ವ್ಯಕ್ತವಾಗಿದೆ. ವಿವಿಧ ಸಂಸ್ಥೆಗಳು ನಡೆಸಿದ ಈ ಸಂಶೋಧನೆಯಲ್ಲಿ, ಎದೆಹಾಲಿನಲ್ಲಿ ಯುರೇನಿಯಂ ಪತ್ತೆಯಾಗಿರುವುದು ಮಕ್ಕಳಲ್ಲಿ ಕ್ಯಾನ್ಸರ್​ ಅಲ್ಲದ ಇತರ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ಮೂಲವಾಗಬಹುದು ಎಂದು ಆತಂಕ ವ್ಯಕ್ತವಾಗಿದೆ. ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಹೆಚ್ಚು ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಿದ್ದು, ಕತಿಹಾರ್​ ಜಿಲ್ಲೆಯಲ್ಲಿ ಪತ್ತೆಯಾದ ಮಾದರಿಯಲ್ಲಿ ಯೂರೇನಿಯಂ ಪ್ರಮಾಣ ಅತ್ಯಧಿಕವಾಗಿದೆ.
"ಎದೆಹಾಲಿನಲ್ಲಿ ಯುರೇನಿಯಂ ಪ್ರಮಾಣ ಇದ್ದಲ್ಲಿ ನರರೋಗ ಉಲ್ಬಣಿಸುವ ಮತ್ತು ಮಕ್ಕಳಲ್ಲಿ ಬುದ್ಧಿ ಪ್ರಮಾಣ ಕಡಿಮೆಯಾಗುವ ಅಪಾಯ ಹೆಚ್ಚು. ಹಾಗೆಂದ ಮಾತ್ರಕ್ಕೆ ಎದೆಹಾಲು ಉಣಿಸುವುದನ್ನು ನಿಲ್ಲಿಸಬಾರದು. ಏಕೆಂದರೆ ಮಕ್ಕಳ ಪೋಷಕಾಂಶಕ್ಕೆ ತಾಯಿಯ ಎದೆಹಾಲು ಅಗತ್ಯ' ಎಂದು ದೆಹಲಿ ಏಮ್ಸ್​ನ ವೈದ್ಯ ಡಾ.ಅಶೋಕ್​ ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಮನುಷ್ಯರ ದೇಹದಲ್ಲಿ ಭಾರಿ ಲೋಹದಂಶ ಪತ್ತೆ ಮತ್ತು ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಇತರ ರಾಜ್ಯಗಳಲ್ಲೂ ಸಂಶೋಧನೆ ಮುಂದುವರಿದಿದೆ.
ಭಾರತದಲ್ಲಿ 18 ರಾಜ್ಯಗಳ 151 ಜಿಲ್ಲೆಗಳಲ್ಲಿ ಯುರೇನಿಯಂ ಮಾಲಿನ್ಯ ಪ್ರಮಾಣ ಪತ್ತೆಯಾಗಿದೆ ಎಂಬುದು ಗಂಭೀರ ಸಂಗತಿ. ಇದರಲ್ಲಿ ಬಿಹಾರದ ವಿವಿಧ ಪ್ರದೇಶಗಳಲ್ಲಿನ ಅಂತರ್ಜಲದಲ್ಲಿ ಯುರೇನಿಯಂ ಶೇಕಡ 1.7ರಷ್ಟು ಕಂಡುಬಂದಿದೆ. ಗಣಿಗಾರಿಕೆ, ಕಲ್ಲಿದ್ದಲು ದಹನ, ಅಣುಸ್ಥಾವರದ ಮಾಲಿನ್ಯ ಮತ್ತು ಫಾಸ್ಪೇಟ್​ ರಸಗೊಬ್ಬರ ಬಳಕೆಯಿಂದಾಗಿ ಯುರೇನಿಯಂ ಜಲಮೂಲಗಳನ್ನು ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಜಲಮೂಲಗಳಿಗೆ ಯುರೇನಿಯಂ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿದೆ ಎಂದು ಈ ಹಿಂದೆ ವಿವಿಧ ಅಧ್ಯಯನ ವರದಿಗಳು ಎಚ್ಚರಿಸುತ್ತಲೇ ಬಂದಿವೆ. ಆದರೆ, ಗಣಿಗಾರಿಕೆಯ ಹೆಚ್ಚಳ ಮತ್ತು ಪ್ರಕೃತಿಗೆ ವಿರುದ್ಧವಾದ ಮಾನವನ ಚಟುವಟಿಕೆಗಳು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿವೆ. ಇದರಿಂದ ಅಂತರ್ಜಲ ಕಲುಷಿತವಾಗುತ್ತಿದ್ದು, ಯುರೇನಿಯಂ ಪ್ರಮಾಣ ಹೆಚ್ಚುತ್ತಿದೆ.
ಪರಿಸರ ಮಾಲಿನ್ಯ ವೇಗವಾಗಿ ಹೆಚ್ಚುತ್ತಿರುವುದು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ಶೋಷಿಸುವ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿರುವುದು ಮನುಕುಲಕ್ಕೆ ಅಪಾಯದ ಸಂಗತಿಯೇ ಹೌದು. ತರಕಾರಿ ಹಾಗೂ ವಿವಿಧ ಪದಾರ್ಥಗಳ ಮೂಲಕ ಮೈಕ್ರೋ ಪ್ಲಾಸ್ಟಿಕ್​ ಕಣಗಳು ದೇಹದೊಳಗೆ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಸೇವಿಸುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು ವಿಷಕಾರಿ ಅಂಶಗಳನ್ನು ಒಳಗೊಳ್ಳುತ್ತಿರುವುದು, ಸ್ವಾಸ್ಥ್ಯದ ವಿಷಯದಲ್ಲಿ ಎಚ್ಚರಿಕೆಯ ಗಂಟೆ. ಪ್ರಕೃತಿಯನ್ನು ಶಿಸಿ ಮತ್ತು ಆರೋಗ್ಯವನ್ನು ನಿರ್ಲಕ್ಷಿಸಿ ಸಾಧಿಸುವಂಥ "ಭೌತಿಕ ಅಭಿವೃದ್ಧಿ' ನಿಜವಾದ ಸಮೃದ್ಧಿಯನ್ನು ತರಲಾರದು.
ಬದಲಿಗೆ, ಈ ಬಗೆಯ ಆಪತ್ತುಗಳನ್ನೇ ಸೃಷ್ಟಿಸುತ್ತದೆ. ಯುರೇನಿಯಂ ಪ್ರಮಾಣ ಇರುವ ಎದೆಹಾಲು ಕುಡಿದ ಶಿಶುಗಳ ಆರೋಗ್ಯದ ಗತಿಯೇನು? ತಮ್ಮದಲ್ಲದ ತಪ್ಪಿಗೆ ಇವು ಏಕೆ ಶಿಕ್ಷೆ ಅನುಭವಿಸಬೇಕು? ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳದಿದ್ದರೆ ನಾಳೆಗಳು ಮತ್ತಷ್ಟು ತ್ರಾಸದಾಯಕವಾಗುತ್ತವೆ. ಹಾಗಾಗುವ ಮುನ್ನವೇ ಎಚ್ಚೆತ್ತುಕೊಳ್ಳೋಣ. ಈ ನಿಟ್ಟಿನಲ್ಲಿ ಮಾಲಿನ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮೊದಲ ಆದ್ಯತೆಯಾಗಬೇಕಿದೆ.