ಭೋಪಾಲ್: ಪ್ರೀತಿಯಲ್ಲಿರುವ ಯುವಕನಿಗೆ ಬೇರೆ ಯುವತಿಯೊಂದಿಗೆ ಮದುವೆ ಮಾಡಿ, ಮದುವೆಗೆ ಮೂರು ವರ್ಷವಾದ ನಂತರ ಆತನ ಪತ್ನಿಯೇ ಅವನನ್ನು ಪ್ರಿಯತಮೆಯೊಂದಿಗೆ ಮದುವೆ ಮಾಡಿಸುವುದೆಲ್ಲ ಸಿನಿಮಾ ಕಥೆಗಳಲ್ಲಿ ಮಾತ್ರ ಸಾಧ್ಯ ಎಂದು ಕೊಂಡಿದ್ದರೆ ಅದು ನಿಮ್ಮ ಭ್ರಮೆ. ಅಕ್ಷರಶಃ ಇದೇ ರೀತಿಯ ಸಿನಿಮಾ ಕಥೆಯೊಂದು ಮಧ್ಯಪ್ರದೇಶದ ದಂಪತಿಯ ಮಧ್ಯೆ ನಡೆದಿದೆ.
ಭೋಪಾಲ್ನಲ್ಲಿ ವಾಸವಿರುವ ದಂಪತಿಗೆ ಮದುವೆಯಾಗಿ 3 ವರ್ಷ ಕಳೆದಿದೆ. ಆದರೆ ಆ ಮನೆಯ ಯಜಮಾನ ಮದುವೆಗೂ ಮೊದಲೇ ಬೇರೊಬ್ಬ ಯುವತಿಯನ್ನು ಪ್ರೀತಿಸಿದ್ದನಂತೆ. ಮದುವೆಯಾದ ಮೇಲೆ ಆ ಯುವತಿಯೊಂದಿಗೆ ಪತ್ನಿಯನ್ನೂ ಪ್ರೀತಿಸಲು ಆರಂಭಿಸಿದನಂತೆ. ತನ್ನ ಪ್ರೀತಿಯ ವಿಚಾರವನ್ನು ಹೆಂಡತಿಗೆ ಹೇಳಿ, ಇಬ್ಬರನ್ನೂ ಪತ್ನಿಯರನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ವ್ಯಕ್ತಪಡಿಸಿದನಂತೆ. ಆದರೆ ಒಂದೇ ಸಮಯದಲ್ಲಿ ಇಬ್ಬರು ಹೆಂಡತಿಯರನ್ನು ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ಗಂಡನಿಗೆ ನಿರಾಶೆ ಮಾಡದ ಪತ್ನಿ ವಿಚ್ಛೇದನ ನೀಡಿದ್ದಾಳೆ. ನಿಮ್ಮ ಪ್ರೇಯಸಿಯೊಂದಿಗೆ ಮದುವೆಯಾಗಿ ಚೆನ್ನಾಗಿರಿ ಎಂದು ಹರಸಿದ್ದಾಳೆ.
ಇಂತದ್ದೊಂದು ಪ್ರಕರಣವನ್ನು ನಡೆಸಿಕೊಟ್ಟಿರುವುದಾಗಿ ವಕೀಲೆಯೊಬ್ಬರು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಆ ವಿಡಿಯೋ ಇದೀಗ ಸಕತ್ ವೈರಲ್ ಆಗಿದೆ. ಎಲ್ಲರಿಗೂ ಇಂತಹ ಹೆಂಡತಿ ಸಿಗುವುದಿಲ್ಲ ಎಂದು ಅನೇಕರು ಹೇಳಿದರೆ, ಧರ್ಮೊಪತ್ನಿಗೆ ಮೋಸ ಮಾಡಿದ್ದಾಗಿ ಅನೇಕರು ಆರೋಪಿಸಿದ್ದಾರೆ. (ಏಜೆನ್ಸೀಸ್)