ನ್ಯೂಸ್

ಮಂತ್ರಾಲಯದಲ್ಲಿ ವರ್ಧಂತಿ ಮಹೋತ್ಸವ: ರಾಯರ ಬೃಂದಾವನಕ್ಕೆ ತಿರುಮಲದ ಶೇಷವಸ್ತ್ರ ಸಮರ್ಪಣೆ

ರಾಯಚೂರು: ಮಂತ್ರಾಲಯದಲ್ಲಿ ಇಂದು(ಬುಧವಾರ) ಶ್ರೀ ರಾಘವೇಂದ್ರ ಸ್ವಾಮಿಗಳ 427ನೇ ವರ್ಧಂತಿ ಮಹೋತ್ಸವ ಸಂಭ್ರಮ ಕಳೆಗಟ್ಟಿದ್ದು, ಶ್ರೀಮಠದಲ್ಲಿ ಬೆಳಗ್ಗೆಯಿಂದಲೇ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಅವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.

ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಶ್ರೀಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ಅಷ್ಟಾಕ್ಷರಿ ಮತ್ತು ಗುರುರಾಯರ ಸೋತ್ರ, ಕವಚ ಪರಾಯಣ ನಡೆಯಿತು. ವರ್ಧಂತೋತ್ಸವ ಹಿನ್ನಲೆ ರಾಯರ ಸನ್ನಿಧಿಗೆ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯಿಂದ ಶೇಷವಸ್ತ್ರ ಆಗಮವಾಯಿತು. ವಿಶೇಷ ಪೂಜೆ ಸಲ್ಲಿಸಿ ರಾಯರಿಗೆ ಶೇಷವಸ್ತ್ರ ಸಮರ್ಪಣೆ ಮಾಡಲಾಯಿತು. ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಿತು. ಚಿನ್ನದ ರಥದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಇಟ್ಟು ಮೆರವಣಿಗೆ ಮಾಡುತ್ತಿದ್ದರೆ ಅತ್ತ ಸಹಸ್ರಾರು ಭಕ್ತರು ಜಯಘೋಷ ಮೊಳಗಿಸಿದರು.

ರಾಯರ ಸನ್ನಿಧಿಯಲ್ಲಿ ಚೆನ್ನೈನ ನಾದಾಹಾರ ಟ್ರಸ್ಟ್​ನಿಂದ 18 ವರ್ಷಗಳಿಂದ ನಿರಂತರ ಸಂಗೀತ ಸೇವೆ ನಡೆಯುತ್ತಿದೆ. ಈ ವರ್ಷವೂ 150 ಸಂಗೀತಗಾರರಿಂದ ಏಕಕಾಲಕ್ಕೆ ಗಾಯನ ಮಾಡುವ ಮೂಲಕ ನಾದಹಾರ ಸಮರ್ಪಣೆ ಮಾಡಲಾಗುತ್ತಿದೆ.