ನ್ಯೂಸ್

ತುಂಬಾ ಆಸೆಯಿಂದ ಫೇಸ್​ಬುಕ್ ಗೆಳತಿ ಭೇಟಿಗೆ ಬಂದವನಿಗೆ ಕಾದಿತ್ತು ಬಿಗ್​ ಶಾಕ್​!

ಕಾಸರಗೋಡು: ಫೇಸ್​ಬುಕ್​ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು 283 ಕಿ.ಮೀ.ದೂರದ ತ್ರಿಶೂರ್​ನಿಂದ ಕಾಸರಗೋಡಿನ ಬೇಕಲಕ್ಕೆ ಬಂದ ಯುವಕ ದಂಗಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ 18ರ ಹರೆಯದ ಯುವತಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ ಆಕೆ 50 ವರ್ಷದ ಗೃಹಿಣಿ ಎಂದು ತಿಳಿದ ಯುವಕ, ತಾನು ಮೋಸಹೋದುದನ್ನು ತಿಳಿದು ತನ್ನಲ್ಲಿದ್ದ ಚಾಕುವನ್ನು ಆಕೆಯತ್ತ ಎಸೆದ ನಾಟಕೀಯ ಘಟನೆ ನಡೆದಿದೆ.

ಘಟನೆ ವಿವರ: ಫೇಸ್​ಬುಕ್ ಮೂಲಕ ಪರಿಚಿತಳಾದ ಯುವತಿಯನ್ನು ನೋಡಲು ತ್ರಿಶೂರ್​ನಿಂದ ರಿಜೋಯ್(28) ತನ್ನ ಸ್ನೇಹಿತನೊಂದಿಗೆ ಬೇಕಲ ಕೋಟೆಗೆ ಬಂದಿದ್ದ. ಯುವತಿಯನ್ನು ಕಂಡಾಗ, ನಿರಾಸೆೆಗೊಂಡ ರಿಜೋಯ್ ಆಕೆಯತ್ತ ಚಾಕುವನ್ನು ಎಸೆದ. ಚಾಟಿಂಗ್ ಸಮಯದಲ್ಲಿ ಗೂಗಲ್ ಪೇ ಮೂಲಕ ಆಗಾಗ ಆಕೆಗೆ ಹಂತಹಂತವಾಗಿ ಕಳುಹಿಸಿದ್ದ 50 ಸಾವಿರ ರೂ.ಮರುಪಾವತಿಸುವಂತೆ ಒತ್ತಾಯಿಸಿದ. ಆಕೆ ನಿರಾಕರಿಸಿದಾಗ ಇಬ್ಬರ ಮಧ್ಯೆ ವಾಗ್ವಾದ ಉಂಟಾಯಿತು. ಪರಿಸ್ಥಿತಿ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು, ಆತನಿಂದ ಪಡೆದ ಮೊತ್ತದಲ್ಲಿ ಅರ್ಧದಷ್ಟನ್ನು ವಾಪಸ್ ಕೊಡಲು ಮಹಿಳೆಗೆ ತಾಕೀತು ಮಾಡಿ ಪ್ರಕರಣ ಮುಕ್ತಾಯಗೊಳಿಸಿದರು.