ಮೀರತ್: ಮದುವೆಯಾದ ಮೇಲೆ ನನ್ನ ಪತ್ನಿ ಜೀನ್ಸ್ ತೊಡಬಾರದು, ಎಲ್ಲರೆದುರು ಕುಣಿಯಬಾರದು ಎಂದು ಏನೇನೋ ಹುಚ್ಚು ಬಯಕೆಗಳನ್ನು ಇಟ್ಟುಕೊಂಡಿರುವ ಪುರುಷರ ಬಗ್ಗೆ ನೀವು ಕೇಳಿರುತ್ತೀರ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತನ್ನ ಪತ್ನಿ ಜೀನ್ಸ್ ತೊಡುವುದಿಲ್ಲ, ಡ್ಯಾನ್ಸ್ ಮಾಡುವುದಿಲ್ಲ ಎನ್ನುವ ಕಾರಣಕ್ಕೇ ಆಕೆಗೆ ತಲಾಖ್ ನೀಡಿದ್ದಾನೆ. ಹೆಂತಿಗೆ ತಲಾಖ್ ನೀಡಿದ ಪತಿರಾಯ, ಮಾವನ ಮನೆಗೆ ಬಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾನೆ.
ಇಂತದ್ದೊಂದು ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವರದಿಯಾಗಿದೆ. ನಗರದ ಲಿಸಾರಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಇಸ್ಮಾಯಿಲ್ನಗರದ ನಿವಾಸಿ ಅಮಿರುದ್ದೀನ್ ತನ್ನ ಮಗಳನ್ನು ಹಾಪುರದ ಪಿಲ್ಖುವಾ ನಿವಾಸಿ ಅನಸ್ಗೆ ಎಂಟು ವರ್ಷಗಳ ಹಿಂದೆಯೇ ಮದುವೆ ಮಾಡಿ ಕೊಟ್ಟಿದ್ದರು. ಅನಸ್ ದೆಹಲಿಯಲ್ಲಿ ಕೆಲಸದ ಮಾಡುತ್ತಿದ್ದ. ಈತ ಯಾವಾಗಲೂ ಪತ್ನಿಗೆ ಜೀನ್ಸ್ ತೊಡಲು ಒತ್ತಾಯಿಸುತ್ತಿದ್ದನಂತೆ. ಡ್ಯಾನ್ಸ್ ಮಾಡು, ಹಾಡು ಹೇಳು ಎಂದು ಪೀಡಿಸುತ್ತಿದ್ದನಂತೆ. ಆದರೆ ಅದಕ್ಕೆಲ್ಲ ಪತ್ನಿ ಒಪ್ಪತ್ತಿರಲಿಲ್ಲ. ಅದರಿಂದಾಗಿ ಸಿಟ್ಟಿಗೆದ್ದ ಅನಸ್, ಡಿಸೆಂಬರ್ 22ರಂದು ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ನಂತರ ಅಲ್ಲಿಂದ ಸೀದಾ ಅಮಿರುದ್ದೀನ್ ಮನೆಗೆ ಬಂದಿದ್ದಾನೆ.
ಅಮಿರುದ್ದೀನ್ ಮನೆಗೆ 22ರ ರಾತ್ರಿ ಬಂದ ಅನಸ್, ದೇಹದ ಮೇಲೆ ಯಾವುದೋ ದ್ರವ್ಯವನ್ನು ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಕುಟುಂಬಸ್ಥರು ಬೆಂಕಿ ನಂದಿಸಿದ್ದಾರೆ. ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)