ನ್ಯೂಸ್

ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ

ಮೀರತ್​: ಮಗನಿಗೆ ಮದುವೆ ಮಾಡಿ, ಮನೆ ತುಂಬಿಸಿಕೊಂಡಿದ್ದ ಸೊಸೆಯನ್ನು ಕೀಳಾಗಿ ಕಂಡ ಮಾವನೊಬ್ಬ ಹಾದಿಯ ಹೆಣವಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಮೃತನ ಮಗನೇ ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ.

ಮೀರತ್​ನ ಖಾಟಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮೃತ ವ್ಯಕ್ತಿ ಕಲ್ಲು ಕೆತ್ತುವ ಕೆಲಸ ಮಾಡುತ್ತಿದ್ದನಂತೆ. ಆತ ಮಗನಿಗೆ ಮದುವೆಯಾದಾಗಿನಿಂದ ಎಲ್ಲ ತಪ್ಪಿಗೂ ಸೊಸೆಯನ್ನು ದೂರುತಿದ್ದನಂತೆ. ಸಾಲ ಮಾಡಿ ಮದುವೆ ಮಾಡಿದ್ದರಿಂದ, ನಿನ್ನಿಂದಲೇ ಸಾಲವಾಯಿತು ಎಂದು ಸೊಸೆಗೆ ಬೈಯುತ್ತಿದ್ದನಂತೆ. ಪ್ರೀತಿಯ ಹೆಂಡತಿಗೆ ಅಪ್ಪ ಬೈಯುವುದನ್ನು ಕಂಡು ಬೇಸತ್ತಿದ್ದ ಮಗ ಜನವರಿ 19ರಂದು ಆತನನ್ನು ಕೊಲೆ ಮಾಡಿದ್ದಾನೆ. ಮೊದಲು ಉಸಿರುಗಟ್ಟಿಸಿ ಸಾಯಿಸಿ ಆಮೇಲೆ ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾನೆ. ನಂತರ ಆತನ ದೇಹವನ್ನು ಊರಿನ ಹೊರಗೆ ಎಸೆದು ಬಂದಿದ್ದಾನೆ.

ಮೃತದೇಹ ಸಿಕ್ಕ ನಂತರ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆಗ ಮಗ ತನಗೆ ಏನೂ ಗೊತ್ತಿಲ್ಲವೆಂದು ನಾಟಕವಾಡಿದ್ದಾನೆ. ಆತನ ಮೇಲೆ ಅನುಮಾನ ಬಂದಿದ್ದು, ಪೊಲೀಸ್​ ಠಾಣೆಗೆ ಎಳೆದುತಂದು ವಿಚಾರಣೆ ನಡೆಸಿದಾಗ ನಿಜ ಘಟನೆಯನ್ನು ಬಾಯಿ ಬಿಟ್ಟಿದ್ದಾನೆ. ಇದೀಗ ಆತನನ್ನು ಬಂಧಿಸಿ, ಪೊಲೀಸರ ವಶದಲ್ಲಿ ಇರಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)