ನ್ಯೂಸ್

ಪಿಎಸ್​ಐ ನೌಕರಿ ಕೊಡಿಸುವುದಾಗಿ 11 ಲಕ್ಷ ರೂ. ಪಡೆದು ವಂಚನೆ: ಹುಬ್ಬಳ್ಳಿಯಲ್ಲಿ ಕೇಸ್​ ದಾಖಲು

Video - Jyothi Bhat

ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಿಎಸ್‌ಐ ಹುದ್ದೆ ನೇಮಕಾತಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ. ಇದೀಗ ಪಿಎಸ್​ಐ ನೌಕರಿಗೆ ಆಸೆ ಪಟ್ಟು ಯುವಕನೊಬ್ಬ ಬರೋಬ್ಬರಿ 11.90 ಲಕ್ಷ ರೂ. ಕೊಟ್ಟು ಕೈ ಸುಟ್ಟುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ವಿರೂಪಾಕ್ಷಪ್ಪ ಮಜ್ಜಿಗೌಡರ ಹಣ ಕಳೆದುಕೊಂಡವರು. ವಿರೂಪಾಕ್ಷಪ್ಪ ಅವರು ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆ ಹೊನ್ನಪ್ಪ ಮೇಟಿ ಮತ್ತು ಈರಪ್ಪ ಬೂದಿಹಾಳ ಎಂಬುವರ ಪರಿಚಯವಾಗಿತ್ತು. ನಂತರ ಅವರಿಬ್ಬರೂ 15 ಲಕ್ಷ ರೂ. ನೀಡಿದರೆ ಪಿಎಸ್​ಐ ನೌಕರಿ ಕೊಡಿಸುವುದಾಗಿ ನಂಬಿಸಿ ವಿರೂಪಾಕ್ಷಪ್ಪ ಮಜ್ಜಿಗೌಡರ ಬಳಿಯಿಂದ 11.90 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು.

ಹಣವನ್ನು ಪಡೆದುಕೊಂಡ ನಂತರ ಆರೋಪಿಗಳಿಬ್ಬರೂ ಉದ್ಯೋಗ ಕೊಡಿಸದೆ ವಂಚಿಸಿದ್ದಾರೆ. ವಾಪಸ್​ ಹಣ ಕೊಡುವಂತೆ ಕೇಳಿದಾಗ ಕೇವಲ 85 ಸಾವಿರ ರೂಪಾಯಿ ಅನ್ನು ವಿರೂಪಾಕ್ಷಪ್ಪ ಮಜ್ಜಿಗೌಡರರಿಗೆ ಮರಳಿಸಿದ್ದಾರೆ. ಉಳಿದ ಹಣ ಕೊಡದೇ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ನಾಗರಾಳ ಗ್ರಾಮದ ಹೊನ್ನಪ್ಪ ಮೇಟಿ ಮತ್ತು ವಿಜಯಪುರ ಜಿಲ್ಲೆ ವಿವೇಕಾನಂದ ನಗರದ ಈರಪ್ಪ ಬೂದಿಹಾಳ ಎಂಬ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.