ಕರೊನಾ ವೈರಸ್ ಹುಟ್ಟಿಗೆ ಕಾರಣವಾಗಿದ್ದು ಚೀನಾ. ಅದರಲ್ಲೂ ಹುಬೈನ್ ವುಹಾನ್ ಪ್ರಾಂತ್ಯ. ಇಡೀ ಜಗತ್ತಿಗೇ ವೈರಸ್ ವ್ಯಾಪಿಸಿದೆ. ಲಕ್ಷಾಂತರ ಜನರಿಗೆ ಸೋಂಕು ತಗುಲಿದೆ. ಪ್ರತಿದಿನ ಅನೇಕರು ಕರೊನಾಕ್ಕೆ ಬಲಿಯಾಗುತ್ತಿದ್ದಾರೆ. 100ಕ್ಕೂ ಹೆಚ್ಚು ದೇಶಗಳು ಕರೋನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಸದ್ಯಕ್ಕಂತೂ ಕರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳಿಲ್ಲ.
ಹೀಗಿರುವಾಗ ಚೀನಾದಿಂದ ಇನ್ನೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮತ್ತೊಂದು ವೈರಸ್ ಹುಟ್ಟಿಕೊಂಡಿದ್ದು, ಅದರ ಹೆಸರು ಹ್ಯಾಂಟ. ಚೀನಾದ ಯುನ್ನಾನ್ ಪ್ರಾಂತ್ಯದ ವ್ಯಕ್ತಿಯೋರ್ವನಿಗೆ ಹ್ಯಾಂಟಾ ವೈರಸ್ ತಗುಲಿ, ಆತ ಮೃತಪಟ್ಟಿದ್ದಾಗಿ ಅಲ್ಲಿನ ಪ್ರಮುಖ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಜಗತ್ತಿನ ಗಮನವೆಲ್ಲ ಕರೊನಾ ವೈರಸ್ ಮೇಲೆಯೇ ಇರವಾಗ ಹೀಗೆ ಸದ್ದಿಲ್ಲದೆ ಮತ್ತೊಂದು ಮಾರಕ ವೈರಸ್ ದಾಂಗುಡಿ ಇಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಗ್ಲೋಬಲ್ ಟೈಮ್ ವರದಿಯಾಗುತ್ತಲೇ ಹ್ಯಾಂಟಾ ವೈರಸ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ.
ಹ್ಯಾಂಟ ವೈರಸ್ ಇದೇ ಮೊದಲಿನದಲ್ಲ. ಆದರೆ ಕರೊನಾ ಭಯದ ನಡುವೆ ಇದೊಂದು ಶುರುವಾಗಿ, ವ್ಯಕ್ತಿ ಮೃತಪಟ್ಟಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಸತ್ತ ವ್ಯಕ್ತಿಯೊಂದಿಗೆ ಬಸ್ನಲ್ಲಿ ಪ್ರಯಾಣ ಮಾಡಿದ್ದಾರೆ ಎನ್ನಲಾದ 32 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಹ್ಯಾಂಟ ವೈರಸ್ ಗಾಳಿಯಿಂದ ಹರಡುವುದಿಲ್ಲ ಮತ್ತು ಕರೊನಾ ವೈರಸ್ಗಿಂತಲೂ ಭಿನ್ನ. ದಂಶಕಗಳ ಪ್ರಭೇದಕ್ಕೆ ಸೇರಿದ ಇಲಿಗಳು, ಅಳಿಲುಗಳಂತಹ ಜೀವಿಗಳಿಂದ ಬರುವ ವೈರಸ್ ಆಗಿದೆ. ಜಗತ್ತಿನಾದ್ಯಂತ ಪಸರಿಸಿ, ಹಲವು ರೋಗ ಲಕ್ಷಣಗಳಿಗೆ ಕಾರಣವಾಗಬಹುದು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತಿಳಿಸಿದೆ.
ಮನೆಯಲ್ಲಿ ಈ ದಂಶಕ ಪ್ರಭೇದ ಪ್ರಾಣಿಗಳನ್ನು ಸಾಕಿದ್ದರೆ ಅಥವಾ ಮನೆಯ ಹೊರಗಡೆ ಅವುಗಳ ಸಂಖ್ಯೆ ಹೆಚ್ಚಿದ್ದರೆ ಹ್ಯಾಂಟ ವೈರಸ್ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ ಇಲಿ, ಅಳಿಲು, ಮೊಲಗಳಂತಹ ದಂಶಕಗಳ ಹಿಕ್ಕೆಗಳು, ಮೂತ್ರ, ಗೂಡು, ಅವುಗಳ ಬಾಯಿಯ ದ್ರವಗಳು ನಮ್ಮ ಕೈಗೆ ತಗುಲಿ, ಅದೇ ಕೈಯಲ್ಲಿ ನಾವು ಮೂಗು, ಕಣ್ಣು, ಬಾಯಿಗಳನ್ನು ಮುಟ್ಟಿಕೊಂಡರೆ ವೈರಸ್ ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗೇ ಓರ್ವನ ಕೈಯಿಗೆ ಇಂತಹ ತ್ಯಾಜ್ಯಗಳು ತಗುಲಿದ್ದು, ಅವನು ಅದೇ ಕೈಯಲ್ಲಿ ಇನ್ನಿತರರನ್ನು ಮುಟ್ಟಿದರೆ ಅವರಿಗೂ ತಗುಲಬಹುದು. ದಂಶಕಗಳು ಕಚ್ಚಿದರೂ ವೈರಸ್ ತಗುಲಬಹುದು. ಆದರೆ ಸಾಧ್ಯತೆ ತೀರ ಕಡಿಮೆ ಎಂದು ಸಿಡಿಸಿ ಮಾಹಿತಿ ನೀಡಿದೆ. (ಏಜೆನ್ಸೀಸ್)