ನವದೆಹಲಿ: ಕ್ರೊವೇಷಿಯಾದಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿ ಅಪಾರವಾದ ಧೈರ್ಯ ಮತ್ತು ಸಾಹಸ ಮೆರೆದು ರಾಷ್ಟ್ರೀಯ ಹೀರೋ ಎನಿಸಿಕೊಂಡಿದ್ದಾರೆ. ಈ ಗೌರವಕ್ಕೆ ಪಾತ್ರರಾಗಲು ಅವರು ಮಾಡಿದ ಅಂಥ ಸಾಹಸವಾದರೂ ಏನು?
ಕೇರಳದ ಕಯಾಂಕುಲಂ ಬಳಿಯ ಕಂಡಲ್ಲೂರ್ನ ಪುಲ್ಲುಕುಲಾಂಗ್ರಾ ಪ್ರದೇಶದ ಬಿಜು ರವೀಂದ್ರನ್ (41) ಕ್ರೊವೇಷಿಯಾದ ಬಾಲ್ಕನ್ ಕಂಟ್ರಿಯ ಜೆಲೊವಾರ್ ಎಂಬಲ್ಲಿ ನೆಲೆಸಿದ್ದಾರೆ. ಇಲ್ಲಿನ ಪೆಟ್ರೋಲಿಯಂ ಸಂಸ್ಕರಣಾ ಘಟಕದಲ್ಲಿ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಮ್ಮ ಕೇರಳದ ಸ್ನೇಹಿತರೊಂದಿಗೆ ಬಿಜು ವಾಸವಾಗಿದ್ದ ಅಪಾರ್ಟ್ಮೆಂಟ್ ಮೇಲ್ಮಹಡಿಯಲ್ಲಿ ಜು.10ರ ತಡರಾತ್ರಿ 2 ಗಂಟೆಯಲ್ಲಿ (ಭಾರತೀಯ ಕಾಲಮಾನ ಮುಂಜಾನೆ 5.30) ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲಿದ್ದ ನಿವಾಸಿಗಳು ಸಹಾಯಕ್ಕಾಗಿ ಕೂಗಲಾರಂಭಿಸಿದ್ದರು. ಗಲಾಟೆಯಿಂದ ಎದ್ದ ಬಿಜು ಹಿಂದುಮುಂದು ಆಲೋಚಿಸದೆ ಮೇಲ್ಮಹಡಿಯಲ್ಲಿದ್ದವರ ಸಹಾಯಕ್ಕೆ ಧಾವಿಸಿದರು.
ಮೂರು ಮಹಡಿಯ ಕಟ್ಟಡದ ಮೂರನೇ ಮಹಡಿಯಲ್ಲಿ ಎರಡು ಪುಟ್ಟ ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದರು. ಪತಿ ರೂಬಿನ್ ಹೇಗೋ ತಪ್ಪಿಸಿಕೊಂಡು ಬಂದು, ತನ್ನ ಪತ್ನಿ ಹೆಲೆನಾ ರೂಬಿನ್ ಮತ್ತು ಅವರ 3 ಮತ್ತು 5 ವರ್ಷದ ಮಕ್ಕಳನ್ನು ಕಾಪಾಡಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಬಿಜು ತಕ್ಷಣವೇ ದೊಡ್ಡ ಏಣಿಯೊಂದನ್ನು ತೆಗೆದುಕೊಂಡು, ಮಹಿಳೆ ಇದ್ದ ಮನೆಯ ಬಾಲ್ಕನಿಯತ್ತ ಸಾಗಲಾರಂಭಿಸಿದರು. ದಟ್ಟವಾದ ಹೊಗೆ ಹಾಗೂ ಬೆಂಕಿಯ ಕೆನ್ನಾಲಗೆಯಿಂದಾಗಿ ಬಾಲ್ಕನಿಗೆ ಹೋಗುವುದು ದುಸ್ತರವಾಗಿತ್ತು. ಹಾಗಾಗಿ, ಕೋಣೆಯೊಂದರ ವೆಂಟಿಲೇಟರ್ ಇರುವ ಕಡೆಗೆ ಬಿಜು ಸಾಗಿದರು.
ವೆಂಟಿಲೇಟರ್ ಅನ್ನು ಮುರಿದು, ಹೆಲೆನಾ ಅವರ ಸಹಾಯದಿಂದ ಮಕ್ಕಳನ್ನು ಪಡೆದು ಸುರಕ್ಷಿತವಾಗಿ ಕೆಳಗಿಳಿಸಿದರು. ಆದರೆ, ಹೆಲೆನಾಗೆ ವೆಂಟೆಲೀಟರ್ ತಲುಪಲು ಸಾಧ್ಯವಾಗಲಿಲ್ಲ. ಕೆಳಗಿದ್ದ ತಮ್ಮ ಸ್ನೇಹಿತರ ಸಹಾಯದಿಂದ ಮತ್ತೊಂದು ಸಣ್ಣ ಏಣಿಯನ್ನು ಪಡೆದುಕೊಂಡು, ವೆಂಟೆಲೇಟರ್ ಮೂಲಕ ಮಹಿಳೆಗೆ ಕೊಟ್ಟರು. ಅದನ್ನು ಹತ್ತಿ ಬಂದ ಅವರನ್ನು ರಕ್ಷಿಸಿದರು.
ತಮ್ಮ ಸುರಕ್ಷತೆಯನ್ನು ಪಣಕ್ಕೊಡ್ಡಿ, ಪ್ರಾಣದ ಹಂಗು ತೊರೆದು ಕ್ರೊವೇಷಿಯಾ ಮೂಲದ ಕುಟುಂಬವನ್ನು ರಕ್ಷಿಸಿಲು ಬಿಜು ಪ್ರಯತ್ನಿಸಿದ್ದಕ್ಕೆ ಸ್ಥಳೀಯರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿ ಅವರು ಕ್ರೊವೇಷಿಯಾದ ರಾಷ್ಟ್ರೀಯ ಹೀರೋ ಎನಿಸಿಕೊಂಡಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬಿಜು, ನಾನು ಹೆಲೆನಾ ರೂಬಿನ್ ಅವರ ಸಹಾಯಕ್ಕೆ ಮುಂದಾದಾಗ ನನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳಾದ ಕೇರಳದ ಪಟ್ಟಣಂಥಿಟ್ಟ ಮೂಲದ ವರ್ಗೀಸ್ ಮತ್ತು ಜೋಬಿ ನನಗೆ ಸಹಾಯಕ್ಕೆ ಬಂದರು. ಅವರು ಇಲ್ಲದೇ ಹೋಗಿದ್ದರೆ ಕುಟುಂಬವನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅರ್ಧ ಗಂಟೆಯಲ್ಲಿ ನಮ್ಮ ರಕ್ಷಣಾ ಕಾರ್ಯಾಚರಣೆ ಮುಗಿದಿದ್ದಾಗಿ ತಿಳಿಸಿದ್ದಾರೆ. ಬಿಜು ಮತ್ತು ಅವರ ಸ್ನೇಹಿತರ ಈ ಸಾಹಸನವನ್ನು ಮೆಚ್ಚಿಕೊಂಡು ಸ್ಥಳೀಯ ಆಡಳಿತ ಸಂಸ್ಥೆಯ ಅಧಿಕಾರಿಗಳು ಬಿಜು ಮತ್ತು ಅವರ ಸ್ನೇಹಿತರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.