ಬೆಂಗಳೂರು: ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ನೆಪಮಾತ್ರ. ರಾಜ್ಯ ರಾಜಕೀಯವು ಮುಂದಿನ ದಿನಗಳಲ್ಲಿ ಮಹತ್ತರ ತಿರುವು ಪಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಎತ್ತಿದ ಆಕ್ಷೇಪ ನೆಪಮಾತ್ರ. ಸಿಎಂ ಸಿದ್ದರಾಮಯ್ಯ ಇವತ್ತು ಬಿ.ಕೆ.ಹರಿಪ್ರಸಾದ್ ಮನೆಗೆ ಹೋಗಿ ಬಂದಿದ್ದಾರೆ. ಮುಂದಿನ ಬೆಳವಣಿಗೆಗಳಿಗೆ ಪೂರಕವಷ್ಟೇ ಎಂದು ವಿಶ್ಲೇಷಿಸಿದರು.
ಕ್ಲೈಮ್ಯಾಕ್ಸ್ ಗೆ ಹಂತಕ್ಕೆ ತಲುಪುವ ಮುಂಚೆ ಇವೆಲ್ಲ ಬೆಳವಣಿಗೆಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೇನು ಬೆಳವಣಿಗೆಗಳಾಗಲಿವೆ ಕಾದು ನೋಡಿ. ಎಲ್ಲವೂ ಗೊತ್ತಾಗುತ್ತದೆ ಎಂದು ಬಿ.ವೈ.ವಿಜಯೇಂದ್ರ ಪುನರುಚ್ಚರಿಸಿದರು.
ಪ್ರತಿಪಕ್ಷಕ್ಕೆ ಜವಾಬ್ದಾರಿ ಜತೆಗೆ ಅದರದ್ದೇ ಆದ ಘನತೆ, ಗೌರವವಿದೆ. ಆದರೆ, ಪ್ರತಿಪಕ್ಷ ನಾಯಕರಿಗೆ ಬೆದರಿಸುವ, ಬ್ಲ್ಯಾಕ್ ಮೇಲ್ ಮಾಡುವ, ಕೇಸ್ ಹಾಕಿ ಹೆದರಿಸಲು ಆಡಳಿತ ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ಯಾವುದೇ ಸರ್ಕಾರ ಶಾಶ್ವತವಲ್ಲ. ಅಧಿಕಾರದ ದರ್ಪ, ದರ್ಬಾರ್ ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರಿಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ನ ಪುಡಾರಿಗಳು ದಿಗ್ಬಂಧನ ಹಾಕಿ ಹಲ್ಲೆಗೆ ಯತ್ನಿಸಿದ್ದರು. ಇದನ್ನು ಖಂಡಿಸಿ ಕಲಬುರಗಿಯಲ್ಲಿ ಪಕ್ಷದ ಹಮ್ಮಿಕೊಂಡಿದ್ದ ಪ್ರತಿಭಟನೆ ಯಶಸ್ವಿಯಾಗಿತ್ತು.
ಈ ವೇಳೆ ನಮ್ಮ ಪಕ್ಷದ ಹಿರಿಯರು, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಅಲ್ಲಿನ ಜಿಲ್ಲಾಧಿಕಾರಿಗಳ ಬಗ್ಗೆ ಕೆಲವು ಮಾತುಗಳನ್ನಾಡಿದ್ದರು. ಇದಕ್ಕಾಗಿ ವಿಷಾದಿಸಿ, ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ ಎಂದು ಸ್ಪಷ್ಟಪಡಿಸಿದ ನಂತರವೂ ಕೇಸ್ ದಾಖಲಿಸಲಾಗಿದೆ.
ಆದರೆ ದಲಿತ ನಾಯಕ ಛಲವಾದಿ ಮೇಲೆ ಹಲ್ಲೆಗೆ ಯತ್ನಿಸಿದ, ಈ ಘಟನೆಗೆ ಕುಮ್ಮಕ್ಕು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಸ್ ಹಾಕಿಲ್ಲ. ದಿಗ್ಬಂಧನ ತಡೆಯುವಲ್ಲಿ ವಿಫಲರಾದ ಪೊಲೀಸರ ವಿರುದ್ಧ ಕ್ರಮವಾಗಿಲ್ಲ ಎಂದು ಬಿ.ವೈವಿಜಯೇಂದ್ರ ದೂರಿದರು.
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿಗೆ ಹೋಗಿದ್ದರು. ಈ ವೇಳೆ ಭೇಟಿಯಾದ ಮುಖಂಡರ ಜತೆಗೆ ಚರ್ಚಿಸಿದರು. ನಂತರ ಹತ್ಯೆಯಾದ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲು ಹೊರಟಾಗ ಕೆಲವರು ಮುತ್ತಿಗೆ ಹಾಕಿ ತಡೆದರು. ಹಾಗೆಯೇ ವಾಪಸ್ಸಾದ ಗೃಹ ಸಚಿವರು ಯಾವುದೇ ಶಾಂತಿ ಸಭೆ ನಡೆಸಲಿಲ್ಲ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದ ಮುಸ್ಲಿಮ್ ತುಷ್ಟೀಕರಣವೇ ಮಂಗಳೂರಿನ ಸಮಸ್ಯೆಯ ಮೂಲ. ಕೆಲವರು ಕೋಮು ಸೌಹಾರ್ದತೆ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಯಾವುದೇ ಕ್ರಮಕೈಗೊಳ್ಳದೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಮೋಹನ್ ದಾಸ್ ಅಗರ್ವಾಲ್ ಎರಡು ದಿನಗಳ ಕಾಲ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಪ್ರಮುಖರೊಂದಿಗೆ ಚರ್ಚಿಸಿದ್ದು, ಇಂದು ಕೂಡ ಹಲವು ಪರಾಮರ್ಶೆ, ಮಧ್ಯಾಹ್ನ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ.
ರಾಜ್ಯದ ಭ್ರಷ್ಟ, ಬೆಲೆಏರಿಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಹೋರಾಟ, ಮುಂದಿನ ಚಟುವಟಿಕೆ, ಸಂಘಟನಾ ಪ್ರವಾಸ, ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ತಯಾರಿ ಕುರಿತು ಚರ್ಚೆಯಾಗಲಿದೆ ಎಂದು ಬಿ.ವೈ.ವಿಜಯೇಂದ್ರ ವಿವರಿಸಿದರು.